ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದು ಕೊಚ್ಚಿ ಹೋದ ವಿದ್ಯಾರ್ಥಿನಿ; ಪೋಷಕರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ
ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದು ವಿದ್ಯಾರ್ಥಿನಿ ಕೊಚ್ಚಿಹೋದ ಘಟನೆ ಸಂಬಂಧ ಇಂದು ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಬಾಲಕಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ಉಡುಪಿ: ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದು ವಿದ್ಯಾರ್ಥಿನಿ ಕೊಚ್ಚಿಹೋದ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನಿನ್ನೆ ನಡೆದಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯ ವಿದ್ಯಾರ್ಥಿನಿ ಸನ್ನಿಧಿ (7) ನೀರುಪಾಲದವಳು. ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ಬೊಳಂಬಳ್ಳಿ ಗ್ರಾಮದ ನಿವಾಸಿ ಪ್ರದೀಪ್ ಪೂಜಾರಿ, ಸುಮಿತ್ರಾ ದಂಪತಿ ಪುತ್ರಿ ಸನ್ನಿಧಿ ಕಾಲು ಸಂಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾಳೆ. ಸದ್ಯ ಸನ್ನಿಧಿಯ ಪತ್ತೆಗಾಗಿ ಭದ್ರತಾ ಸಿಬ್ಬಂದಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಇಂದು ಬಾಲಕಿಯ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಊರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರ ಮುಂದೆ ಕಾಲ್ತೋಡು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು, ಅನೇಕ ಕಡೆಗಳಲ್ಲಿ ಹಾನಿಗಳು ಉಂಟಾಗಿವೆ. ಅದರಂತೆ 60ಕ್ಕೂ ಹೆಚ್ಚು ನಾಡದೋಣಿಗಳು ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೂ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿ, ಈಗಾಗಲೇ ಸಂಭವಿಸಿದ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.