ಉಡುಪಿ: ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಪಟುವಿಗೆ ಇನ್ನಷ್ಟು ಸಾಧಿಸುವ ಆಸೆ; ಬೇಕಿದೆ ಸರ್ಕಾರದ ನೆರವು
Udupi News: ಪುಟ್ಟ ಹಳ್ಳಿಯಿಂದ ಬೆಳೆದು ಬಂದ ಅಕ್ಷತಾ ರಾಷ್ಟ್ರ ಮಟ್ಟದಲ್ಲಿ 9 ಬಾರಿ ಸ್ಪರ್ಧಿಸಿ ಈಗಾಗಲೆ 25 ಕ್ಕೂ ಅಧಿಕ ಪದಕ ಗೆದ್ದಿದ್ದಾಳೆ. ಈ ಅಪ್ರತಿಮ ಕ್ರೀಡಾ ಸಾಧಕಿಯನ್ನ ಸರ್ಕಾರ ಸೇರಿದಂತೆ, ದಾನಿಗಳು ಸಹಾಯ ಮಾಡಿ ಬೆಳೆಸಬೇಕಿದೆ. ಇದರಿಂದ ಆಕೆ ಮತ್ತಷ್ಟು ಸಾಧನೆ ಮಾಡಬಹುದು.
ಉಡುಪಿ: ಆಕೆ ಬಂಗಾರದ ಹುಡುಗಿ. ಪುಟ್ಟ ಗ್ರಾಮದ ಕಟ್ಟ ಕಡೆಯ ಪುಟ್ಟ ಮನೆಯೊಂದರಲ್ಲಿ ಕಡುಬಡತನದಲ್ಲೇ ಬೆಳೆದ ಕ್ರೀಡಾ ಸಾಧಕಿ. ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಈಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎನ್ನುವ ಕನಸಿದೆ. ಆದರೆ ಆಕೆಗೆ ಬಡತನ ಎನ್ನುವುದು ಸಾಧನೆ ಮಾಡೋಕೆ ಅಡ್ಡಿಯಾಗಿದೆ. ಅದನ್ನು ಮೀರಿ ಬೆಳೆಯಲು ಸರ್ಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.
ಅಕ್ಷತಾ ಪೂಜಾರಿ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಮ್ಮೆಯ ಕುವರಿ. 23 ವರ್ಷದ ಈಕೆ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಸಣ್ಣ ಗ್ರಾಮದಿಂದ ಬಂದವಳು. ಈಕೆಯ ವಯಸ್ಸು ಸಣ್ಣದಾದರೂ ಸಾಧನೆ ಮಾತ್ರ ದೊಡ್ಡದು. ಹೌದು, ಕೃಷಿಕ ಅಂಗು ಪೂಜಾರಿ ಹಾಗೂ ಜಯಂತಿ ದಂಪತಿಯ ಏಳು ಪುತ್ರಿಯರಲ್ಲಿ ಕೊನೆಯ ಮಗಳು ಇವಳು. ಇದೇ ವರ್ಷ ಸೆಪ್ಟೆಂಬರ್ನಲ್ಲಿ ತೆಲಂಗಾಣದ ವಾರಂಗಲ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೆಪ್ಟತ್ಲಾನ್ ಸ್ಪರ್ಧೆಯಲ್ಲಿ 4939 ಅಂಕ ಪಡೆಯುವ ಮೂಲಕ ಚಿನ್ನದ ಪದಕ ಗಳಿಸಿದ್ದಾಳೆ. ಮಹಿಳೆಯರ ವಿಭಾಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಹರ್ಡಲ್, ಹೈಜಂಪ್, ಲಾಂಗ್ ಜಂಪ್ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧಿಸಿ ಅಧಿಕ ಅಂಕ ಪಡೆದವರಿಗೆ ಚಿನ್ನದ ಪದಕ ಲಭಿಸುತ್ತೆ. ಈ ಸ್ಪರ್ಧೆಯಲ್ಲಿ ಅಕ್ಷತಾ 4939 ಅಂಕ ಪಡೆದು ಚಿನ್ನದ ಪದಕ ಪಡೆದು ತನ್ನೂರಿನ, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾಳೆ.
ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಅಕ್ಷತಾಳಿಗೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರುವ ಆಸೆಯಿದೆ. 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಗುರಿಯಿದೆ. ಆದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಆರ್ಥಿಕ ಸಂಕಷ್ಟ ಸವಾಲಾಗಿದೆ. ಖಾಸಗಿಯಾಗಿ ಟ್ರೈ ನಿಂಗ್, ಒಳ್ಳೆಯ ನ್ಯೂಟ್ರೀಶನ್ ಫುಡ್ ಹೀಗೆ ಸರಿಯಾದ ತರಬೇತಿ ಅಗತ್ಯ ಇರೋದ್ರಿಂದ ಹೆತ್ತವರಿಗೆ ಹಣ ಭರಿಸಲು ಹೊರೆಯಾಗಿದೆ. ಗ್ರಾಮದ ಪ್ರಮುಖರು, ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಆದ್ರೆ ಮುಖ್ಯವಾಗಿ ಸರ್ಕಾರ ಈಕೆಯ ಬೆನ್ನಿಗೆ ನಿಂತು ಪ್ರೋತ್ಸಾಹಿಸಬೇಕಿದೆ. ರಾಷ್ಟ್ರ ಮಟ್ಟದಲ್ಲಿ ತನ್ನ ರಾಜ್ಯದ ಕೀರ್ತಿ ಹೆಚ್ಚಿಸಿದ ಅಕ್ಷತಾ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಇದ್ದಾಳೆ. ಸರ್ಕಾರಿ ಉದ್ಯೋಗದ ಮೂಲಕವಾದ್ರೂ ಕುಟುಂಬದ ಆರ್ಥಿಕ ಸಂಕಷ್ಟ ಕಡಿಮೆ ಮಾಡುವುದರ ಜೊತೆಗೆ ಒಲಿಂಪಿಕ್ನಲ್ಲಿ ಸಾಧನೆ ಮಾಡುವ ಇರಾದೆ ಈಕೆಯದ್ದು.
ಪುಟ್ಟ ಹಳ್ಳಿಯಿಂದ ಬೆಳೆದು ಬಂದ ಅಕ್ಷತಾ ರಾಷ್ಟ್ರ ಮಟ್ಟದಲ್ಲಿ 9 ಬಾರಿ ಸ್ಪರ್ಧಿಸಿ ಈಗಾಗಲೆ 25 ಕ್ಕೂ ಅಧಿಕ ಪದಕ ಗೆದ್ದಿದ್ದಾಳೆ. ಈ ಅಪ್ರತಿಮ ಕ್ರೀಡಾ ಸಾಧಕಿಯನ್ನ ಸರ್ಕಾರ ಸೇರಿದಂತೆ, ದಾನಿಗಳು ಸಹಾಯ ಮಾಡಿ ಬೆಳೆಸಬೇಕಿದೆ. ಒಟ್ಟಿನಲ್ಲಿ ಇದರಿಂದ ಆಕೆ ಮತ್ತಷ್ಟು ಸಾಧನೆ ಮಾಡಬಹುದು.
ವರದಿ: ಹರೀಶ್ ಪಾಲೆಚ್ಚಾರ್, ಟಿವಿ9, ಉಡುಪಿ
ಇದನ್ನೂ ಓದಿ: ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು
ಇದನ್ನೂ ಓದಿ: ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಸಿಕ್ತು ಟ್ರೇಡ್ಮಾರ್ಕ್; ಆರು ಇಡ್ಲಿಗೆ 1.99 ಡಾಲರ್!