ಸ್ವಾವಲಂಬಿ ಉದ್ಯೋಗದ ಕನಸು ಕಂಡವರಿಗೆ ಆಸರೆಯಾದ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆ; ಹೇಗೆ ಗೊತ್ತಾ?
ಸ್ವಾವಲಂಬಿಯಾಗಿ ದುಡಿದು ಕುಟುಂಬ ನಿರ್ವಹಣೆ ಮಾಡುವ ಕನಸು ಯಾರಿಗೆ ಇಲ್ಲ ಹೇಳಿ. ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಾವಲಂಬಿ ಆಗಬೇಕು ಎಂದು ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಕೂಡ ಸ್ವಉದ್ಯೋಗ ಸ್ವಾವಲಂಬನೆಗೆ ನೆರವು ನೀಡುತ್ತಿದೆ. ಹಾಗಾದರೆ ಈ ಸ್ವಾವಲಂಬನೆಯ ಹಾದಿಯಲ್ಲಿ ಮಾಡುವ ಉದ್ಯೋಗಕ್ಕೆ ತರಬೇತಿ ಯಾರು ನೀಡುತ್ತಾರೆ ಎನ್ನುವ ಪ್ರಶ್ನೆ ಸಹಜ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಉಡುಪಿ, ಮೇ.21: ರಾಜ್ಯದಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡಿರುವ ಜಿಲ್ಲೆ ಉಡುಪಿ. ಶೈಕ್ಷಣಿಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನ ನೀಡುವ ಸಾಕಷ್ಟು ವಿದ್ಯಾಸಂಸ್ಥೆಗಳು ಜಿಲ್ಲೆಯಲ್ಲಿದೆ. ಇಲ್ಲಿ ಶಿಕ್ಷಣ ಪಡೆದು ಹೊರಗೆ ಬರುವ ವಿದ್ಯಾರ್ಥಿಗಳಿಗೆ ಮುಂದಿನ ಜೀವನ ರೂಪಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಸಹಜ. ಬಹುತೇಕ ವಿದ್ಯಾರ್ಥಿಗಳು ಪಟ್ಟಣದ ಹಾದಿ ಹಿಡಿದು ಬೆಂಗಳೂರು, ಮುಂಬೈ, ದೆಹಲಿ ಅಂತ ಪ್ರದೇಶಗಳಿಗೆ ತೆರಳಿ ಕೆಲಸ ಹುಡುಕಿಕೊಳ್ಳುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಕುಟುಂಬದ ಉದ್ಯಮ ಅಥವಾ ಉದ್ಯೋಗ ಏನಿದೆ ಅದನ್ನೇ ನಿರ್ವಹಿಸಿಕೊಂಡು ಹೋಗುತ್ತಾರೆ. ಹಾಗಾದರೆ ಉಳಿದ ವಿದ್ಯಾರ್ಥಿಗಳು ಏನು ಮಾಡಬೇಕು ಎನ್ನುವ ಪ್ರಶ್ನೆ ಮೂಡಿದಾಗ ನೆನಪಾಗುವುದು ಸ್ವಉದ್ಯೋಗ. ಇಂತಹ ಸ್ವಉದ್ಯೋಗದ ಕನಸು ಹೊಂದಿರುವ ನೂರಾರು ಮಂದಿ ಆಕಾಂಕ್ಷೆಗಳಿಗೆ ಬ್ರಹ್ಮಾವರದ ರೋಡ್ ಸಂಸ್ಥೆ, ತರಬೇತಿ ನೀಡುತ್ತಾ ಬಂದಿದೆ.
ತರಬೇತಿಯ ಜೊತೆಗೆ ಉಚಿತ ಊಟ ವಸತಿಯನ್ನ ನೀಡುವ ಈ ಸಂಸ್ಥೆ ಇದುವರೆಗೂ ಲಕ್ಷಾಂತರ ಮಂದಿ ಯುವಕ- ಯುವತಿಯರಿಗೆ ಸ್ವ ಉದ್ಯೋಗ ಮಾಡಲು ನೆರವಾಗಿದೆ ಎಂದರೆ ನೀವು ನಂಬಲೇಬೇಕು. ಪ್ರತಿ ವರ್ಷವೂ ಕೂಡ ವರ್ಷದ 365 ದಿನವೂ ಕೂಡ ಇಲ್ಲಿ ವಿವಿಧ ಸ್ವಉದ್ಯೋಗ ಆಸಕ್ತರಿಗೆ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಕೋಳಿ, ಕುರಿ ಸಾಕಣೆಯಿಂದ ಹಿಡಿದು ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆಯ ಕುರಿತು ಕೂಡ ತರಬೇತಿ ನೀಡಲಾಗುತ್ತಿದೆ. ಮುಖ್ಯವಾಗಿ ಮೋಟರ್ ರಿವೈಂಡಿಂಗ್, ಎಸಿ ಫ್ರಿಡ್ಜ್ ರಿಪೇರಿ, ಮೊಬೈಲ್ ರಿಪೇರಿ, ಬ್ಯೂಟಿಷಿಯನ್ ತರಬೇತಿ, ಹೋಲಿಗೆ ತರಬೇತಿ ಹೀಗೆ ಹಲವಾರು ತರಬೇತಿಗಳನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಇದನ್ನೂ ಓದಿ:ದೋಸೆ ಮಾತ್ರವಲ್ಲ ದಾವಣಗೆರೆ ಶಾವಿಗೆ ಸಹ ಅಮೆರಿಕಾದಲ್ಲಿ ಫೇಮಸ್: ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿ
ಬ್ರಹ್ಮಾವರದ ರೋಡ್, ಹೊರ ಜಿಲ್ಲೆಯಿಂದಲೂ ಕೂಡ ಸಾಕಷ್ಟು ಜನ ಉದ್ಯೋಗ ಆಕಾಂಕ್ಷಿಗಳು ಬಂದು ತರಬೇತಿ ಪಡೆದು ತೆರಳುತ್ತಾರೆ. ಇಲ್ಲಿ ತರಬೇತಿಯ ಜೊತೆಗೆ ಬ್ಯಾಂಕ್ ವ್ಯವಹಾರದ ನಿರ್ವಹಣೆ ಕುರಿತು ಕೂಡ ಜ್ಞಾನವನ್ನು ನೀಡಲಾಗುತ್ತಿರುವುದು ಸ್ವ-ಉದ್ಯೋಗ ಮಾಡುವ ಯುವಕ-ಯುವತಿಯರಿಗೆ ಸಹಾಯವಾಗಿದೆ. ಇನ್ನು ಉದ್ಯೋಗದ ತರಬೇತಿಯ ಜೊತೆಗೆ ಯಾವುದೇ ಉದ್ಯೋಗ ಮಾಡಲು ಬಯಸುವ ಯುವಕ ಯುವತಿಯರಿಗೆ ಸಂಬಂಧಪಟ್ಟ ಬ್ಯಾಂಕ್ನಿಂದ ಲೋನ್ ಮಾಡಿ ಕೊಡುವ ವ್ಯವಸ್ಥೆಯನ್ನು ಕೂಡ ಸಂಸ್ಥೆಯಿಂದ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆಯುವ ಈ ಸಂಸ್ಥೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೂಡ ಕಾರ್ಯನಿರ್ವಹಿಸಿರುವುದು ಉದ್ಯೋಗ ಆಕಾಂಕ್ಷಿಗಳಿಗೆ ನೆರವವಾಗುತ್ತಿದೆ.
ಒಟ್ಟಾರೆಯಾಗಿ ಧರ್ಮ ಕ್ಷೇತ್ರವೆಂದು ಹೆಸರು ಪಡೆದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರನ ಹೆಸರಿನಲ್ಲಿ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ ಜೊತೆಗೆ ರುಡ್ ಸೆಟ್ ಸಂಸ್ಥೆ ಉದ್ಯೋಗ ದಾನ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಈ ಸಂಸ್ಥೆಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲಿ ಸ್ವ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಕನಸು ನನಸಾಗಲು ನೆರವಾಗಲಿ ಎಂದು ಆಶಿಸೋಣ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ