AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ವಿರುದ್ಧ ಉಡುಪಿಯಲ್ಲಿ ಕೇಸ್ ದಾಖಲು

ಈ ಹಿಂದೆ ಉಡುಪಿಯಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಹಾತ್ಮ ಗಾಂಧೀಜಿ ಅವರು ಜಿನ್ನಾ ಜೊತೆ ಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ. ಹೀಗಾಗಿ, ಅವರನ್ನು ನಾವು ರಾಷ್ಟ್ರಪಿತ ಎಂದು ಒಪ್ಪುವುದಿಲ್ಲ ಎಂದು ಡೆಹ್ರಾಡೂನ್​ನ ಚಿಂತಕಿ ಮೀನಾಕ್ಷಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ವಿರುದ್ಧ ಉಡುಪಿಯಲ್ಲಿ ಕೇಸ್ ದಾಖಲು
Meenakshi Sehrawat
ಸುಷ್ಮಾ ಚಕ್ರೆ
|

Updated on: Jan 11, 2025 | 10:52 PM

Share

ಬೆಂಗಳೂರು: ಕಾಂಗ್ರೆಸ್ ಆಡಳಿತದ ಕರ್ನಾಟಕದ ಪೊಲೀಸರು ಮಹಾತ್ಮ ಗಾಂಧೀಜಿಯವರ ಬಗ್ಗೆ ‘ಪ್ರಚೋದನಕಾರಿ ಹೇಳಿಕೆ’ ನೀಡಿದ್ದಕ್ಕಾಗಿ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಇಂದು (ಜನವರಿ 11) ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕರ್ನಾಟಕ ಪೊಲೀಸರು ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

“ನಾನು ‘ರಾಷ್ಟ್ರಪಿತ’ ಎಂದು ಕರೆಯಲ್ಪಡುವ ಗಾಂಧೀಜಿ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದರಿಂದ ನನ್ನ ವಿರುದ್ಧ ಕೇಸ್ ದಾಖಲಿಸಲಾಗಿದೆ” ಎಂದು ಮೀನಾಕ್ಷಿ ಸೆಹ್ರಾವತ್ ಹೇಳಿದ್ದಾರೆ. ಐತಿಹಾಸಿಕ ಸತ್ಯ ಸಂಗತಿಗಳನ್ನು ನನ್ನ ಭಾಷಣದಲ್ಲಿ ಹೇಳಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಆದೇಶದ ವೇಳೆ ಗಾಂಧೀಜಿಯ ರಾಮರಾಜ್ಯ ಪಾಠ ಹೇಳಿದ ಕೋರ್ಟ್​!

ನಾನು ಗಾಂಧೀಜಿ ಬಗ್ಗೆ ಮಾತನಾಡಿದ್ದಕ್ಕೆ ಕೇಸ್ ದಾಖಲಿಸಿದ್ದಾರೆ. ಆದರೆ, ವೀರ ಸಾವರ್ಕರ್, ಭಗತ್ ಸಿಂಗ್, ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮನಂತಹ ಹಿಂದೂ ಹೋರಾಟಗಾರರು ಮತ್ತು ಹಿಂದೂ ದೇವರುಗಳನ್ನು ನಿಂದಿಸುವವರ ವಿರುದ್ಧ ಎಂದಿಗೂ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಟೀಕಿಸಿದ್ದಾರೆ.

“ನನಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯವಿಲ್ಲ ಎಂದು ಅನಿಸುತ್ತದೆ” ಎಂದು ಮೀನಾಕ್ಷಿ ಸೆಹ್ರಾವತ್ ಟೀಕಿಸಿದ್ದಾರೆ.

ಇದನ್ನೂ ಓದಿ: ವೀರ ಸಾವರ್ಕರ್​ ಭಾರತದ ಹೆಮ್ಮೆಯ ಪುತ್ರ ಎಂದಿದ್ದ ಇಂದಿರಾ ಗಾಂಧಿ; ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

ಮೀನಾಕ್ಷಿ ಸೆಹ್ರಾವತ್ ವಿವಾದವೇನು?:

ಕೆಲವು ದಿನಗಳ ಹಿಂದೆ ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡೆಹ್ರಾಡೂನ್ ಚಿಂತಕಿ ಮೀನಾಕ್ಷಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಬಾಂಗ್ಲಾ ಪಾಠ ಎಂಬ ವಿಷಯದ ಬಗ್ಗೆ ಹಿಂದಿಯಲ್ಲಿ ಮಾತನಾಡಿದ್ದ ಮೀನಾಕ್ಷಿ, ಜಿನ್ನಾ ಜೊತೆ ಸೇರಿಕೊಂಡು ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ. ಗಾಂಧೀಜಿ ಹಿಂದೂಗಳನ್ನು ದುರ್ಬಲಗೊಳಿಸಲು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಅವರನ್ನು ನಾವು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಬೇರೆ ಧರ್ಮಗಳ, ಗುಂಪುಗಳ ನಡುವೆ ವೈಮನಸ್ಸು, ದ್ವೇಷ, ಸಮಾಜದಲ್ಲಿ ಅಶಾಂತಿ ಹರಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಉಡುಪಿಯ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ