ವೀರ ಸಾವರ್ಕರ್ ಭಾರತದ ಹೆಮ್ಮೆಯ ಪುತ್ರ ಎಂದಿದ್ದ ಇಂದಿರಾ ಗಾಂಧಿ; ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು
ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ವಾಗ್ದಾಳಿಗೆ ಬಿಜೆಪಿ ತಿರುಗೇಟು ನೀಡಿದೆ. ವೀರ ಸಾವರ್ಕರ್ ಬಗ್ಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಡಿಎ ನಾಯಕರು ಹಂಚಿಕೊಂಡಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ಸಾವರ್ಕರ್ ಸಂವಿಧಾನವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದರು ಎಂದು ಟೀಕಿಸಿದ್ದರು.
ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ವಿರುದ್ಧ ಕಿಡಿ ಕಾರಿದ್ದರು. ಮನುಸ್ಮೃತಿಯೇ ಕಾನೂನು ಎಂದು ಪರಿಗಣಿಸಿದ್ದ ವೀರ ಸಾವರ್ಕರ್ ಸಂವಿಧಾನವನ್ನು ಕಡೆಗಣಿಸಿದ್ದರು. ಸಂವಿಧಾನವನ್ನು ಗೌರವಿಸುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರು ಈ ಮೂಲಕ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದಿದ್ದರು. ಆದರೆ, ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ವೀರ ಸಾವರ್ಕರ್ ಭಾರತದ ಹೆಮ್ಮೆಯ ಪುತ್ರ ಎಂದು ಬರೆದಿದ್ದ ಪತ್ರವೊಂದನ್ನು ಹಂಚಿಕೊಂಡಿದೆ.
ಇಂದಿರಾ ಗಾಂಧಿಯವರು ಸಾವರ್ಕರ್ ಅವರನ್ನು “ಭಾರತದ ಹೆಮ್ಮೆಯ ಪುತ್ರ” ಎಂದು ಕರೆದಿದ್ದರು. ಹಾಗಾದರೆ ನಿಮ್ಮ ಅಜ್ಜಿಯೂ ಸಂವಿಧಾನದ ವಿರುದ್ಧವೇ? ಸಾವರ್ಕರ್ ವಿರುದ್ಧ ಮಾತನಾಡುವ ಅಭ್ಯಾಸ ನಿಮಗಿದೆ. ನಾವು ಸಾವರ್ಕರ್ ಅವರನ್ನು ಹೊಗಳಲು ಹೆಮ್ಮೆ ಪಡುತ್ತೇವೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂವಿಧಾನ, ವೀರ ಸಾವರ್ಕರ್, ಅದಾನಿ, ಮನುಸ್ಮೃತಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಅಬ್ಬರಿಸಿದ ರಾಹುಲ್ ಗಾಂಧಿ
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಒಮ್ಮೆ ಈ ಬಗ್ಗೆ ಅಜ್ಜಿಯೊಂದಿಗೆ ಮಾತನಾಡಿದ್ದೆ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಅಜ್ಜಿ ಹೇಳಿದ್ದರು. ಪತ್ರ ಬರೆದು ಬ್ರಿಟಿಷರಿಂದ ಕ್ಷಮೆ ಕೇಳಿದ್ದರು ಎಂದೂ ಹೇಳಿದ್ದರು. ಗಾಂಧೀಜಿ ಮತ್ತು ನೆಹರೂಜಿ ಜೈಲಿಗೆ ಹೋದರು, ಆದರೆ ಸಾವರ್ಕರ್ ಅವರು ಕ್ಷಮೆ ಕೇಳಿ ಬಚಾವ್ ಆದರು ಎಂದು ಅವರು ಹೇಳಿದ್ದರು. ಇದು ಸಾವರ್ಕರ್ ಬಗ್ಗೆ ಅವರ ನಿಲುವಾಗಿತ್ತು ಎಂದು ರಾಹುಲ್ ಹೇಳಿದ್ದಾರೆ.
This document is for Rahul Gandhi Ji as he made an incorrect statement in Lok Sabha about Veer Savarkar. Indira Gandhi. pic.twitter.com/Me8CuS58E8
— Kiren Rijiju (@KirenRijiju) December 14, 2024
ಇಂದು ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ವೀರ ಸಾವರ್ಕರ್ ಮನುಸ್ಮೃತಿಯೇ ಕಾನೂನು ಎಂದು ಪರಿಗಣಿಸಿದ್ದರು. ಮನುಸ್ಮೃತಿಯು ನಮ್ಮ ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಹೆಚ್ಚು ಪೂಜಿಸಬಹುದಾದ ಗ್ರಂಥವಾಗಿದೆ. ನಮ್ಮ ಪ್ರಾಚೀನ ಕಾಲವು ನಮ್ಮ ಸಂಸ್ಕೃತಿ, ಪದ್ಧತಿಗಳು, ಚಿಂತನೆ ಮತ್ತು ಆಚರಣೆಗೆ ಆಧಾರವಾಗಿದೆ. ಈ ಪುಸ್ತಕವು ಶತಮಾನಗಳಿಂದ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕ ಮೆರವಣಿಗೆಯನ್ನು ಕ್ರೋಡೀಕರಿಸಿದೆ. ಇಂದು ಮನುಸ್ಮೃತಿಯೇ ಕಾನೂನಾಗಿದೆ ಎಂಬುದು ಸಾವರ್ಕರ್ ಅವರದೇ ಮಾತುಗಳು ಎಂದು ರಾಹುಲ್ ಗಾಂಧಿ ಇಂದು ಹೇಳಿದ್ದರು.
ಇದನ್ನೂ ಓದಿ: ವೀರ ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆ; ರಾಹುಲ್ ಗಾಂಧಿಗೆ ಲಕ್ನೋ ಕೋರ್ಟ್ ಸಮನ್ಸ್ ಜಾರಿ
ವೀರ ಸಾವರ್ಕರ್ ಅವರ ಈ ಮಾತುಗಳನ್ನು ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂದು ರಾಹುಲ್ ಗಾಂಧಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಏಕೆಂದರೆ ನೀವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ನೀವು ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ ಎಂದರ್ಥ. ನೀವು ಸಾವರ್ಕರ್ ಅವರನ್ನು ನಿಂದಿಸುತ್ತಿದ್ದೀರಿ, ಸಾವರ್ಕರ್ ಅವರನ್ನು ಮಾನಹಾನಿ ಮಾಡುತ್ತಿದ್ದೀರಿ ಎಂದು ಅರ್ಥವಾಗುತ್ತದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ