ವೀರ ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆ; ರಾಹುಲ್ ಗಾಂಧಿಗೆ ಲಕ್ನೋ ಕೋರ್ಟ್ ಸಮನ್ಸ್ ಜಾರಿ
ವೀರ ಸಾವರ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ, ರಾಜಕೀಯ ಚರ್ಚೆಗಳು ಮತ್ತು ಕಾನೂನು ಪ್ರಕ್ರಿಯೆಗಳನ್ನು ಹುಟ್ಟುಹಾಕಿದ್ದಕ್ಕಾಗಿ 2025ರ ಜನವರಿ 10ರಂದು ವಿಚಾರಣೆಗೆ ಹಾಜರಾಗಬೇಕೆಂದು ರಾಹುಲ್ ಗಾಂಧಿಗೆ ಲಕ್ನೋ ನ್ಯಾಯಾಲಯವು ಸಮನ್ಸ್ ನೀಡಿದೆ. 2022ರ ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀರ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ.
ಲಕ್ನೋ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು 2025ರ ಜನವರಿ 10ರಂದು ವಿಚಾರಣೆಗೆ ಹಾಜರಾಗುವಂತೆ ಲಕ್ನೋ ಕೋರ್ಟ್ ಸಮನ್ಸ್ ನೀಡಿದೆ. ವೀರ ಸಾವರ್ಕರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯವು ಜನವರಿ 10ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2022ರಲ್ಲಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ನೀಡಿದ ಪ್ರಚೋದನಕಾರಿ ಹೇಳಿಕೆ ವಿರುದ್ಧ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದ್ವೇಷ ಉತ್ತೇಜಿಸುವ ಉದ್ದೇಶದಿಂದ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿದೆ. 2022ರ ಡಿಸೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವೀರ ಸಾವರ್ಕರ್ ಅವರ ಬಗ್ಗೆ ಅವಮಾನಕಾರಿ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ಅವರು ಈ ಪ್ರಕರಣವನ್ನು ದಾಖಲಿಸಿದ್ದರು.
ಇದನ್ನೂ ಓದಿ: ವೀರ ಸಾವರ್ಕರ್ ನಿಮ್ಮಂತೆ ವಂಶವಾದದಿಂದ ಬೆಳೆದವರಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತೀಕ್ಷ್ಣ ತಿರುಗೇಟು
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ವೀರ ಸಾವರ್ಕರ್ ಅವರನ್ನು “ಇಂಗ್ಲಿಷ್ ಸೇವಕ” ಮತ್ತು “ಪಿಂಚಣಿದಾರ” ಎಂದು ಉಲ್ಲೇಖಿಸಿದ್ದರು ಎಂದು ಪಾಂಡೆ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಯನ್ನು ದುರ್ಬಲಗೊಳಿಸುವ ಮತ್ತು ಸಮಾಜದಲ್ಲಿ ವಿಭಜನೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನೀಡಲಾದ ಹೇಳಿಕೆಯು ದ್ವೇಷವನ್ನು ಹರಡುವ ಪ್ರಯತ್ನದ ಭಾಗವಾಗಿದೆ ಎಂದು ಪಾಂಡೆ ವಾದಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿತ್ತು. ವೀರ ಸಾವರ್ಕರ್ ವಸಾಹತುಶಾಹಿ ಅವಧಿಯಲ್ಲಿ ಬ್ರಿಟಿಷರೊಂದಿಗೆ ಸಹಕರಿಸಿದ್ದರು ಎಂದು ಹೇಳಿದ್ದರು. ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರಗಳನ್ನು ಬರೆದು, ಅವರ ಪರವಾಗಿ ಉಳಿಯಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಭಯದಿಂದ ಕ್ಷಮೆಯಾಚಿಸುವುದಾಗಿಯೂ ಹೇಳಿದ್ದರು. ಈ ಮೂಲಕ ಸಾವರ್ಕರ್ ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇದನ್ನೂ ಓದಿ: ಜೋ ಬೈಡೆನ್‌ನಂತೆ ಪ್ರಧಾನಿ ಮೋದಿಗೂ ನೆನಪಿನ ಶಕ್ತಿಯ ಸಮಸ್ಯೆಯಿದೆ; ರಾಹುಲ್ ಗಾಂಧಿ ಟೀಕೆ
ಈ ಟೀಕೆಗಳು ತಕ್ಷಣವೇ ವಿವಾದವನ್ನು ಸೃಷ್ಟಿಸಿದ್ದವು. ಅನೇಕರು ರಾಹುಲ್ ಗಾಂಧಿಯವರು ಇತಿಹಾಸವನ್ನು ತಿರುಚಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿಯನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣವು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ