ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿಯ ಮೃತದೇಹ ಪತ್ತೆ
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನೀರುಪಾಲಾಗಿದ್ದ ಬಾಲಕಿ ಸನ್ನಿಧಿ ಮೃತದೇಹ ಪತ್ತೆಯಾಗಿದೆ.
ಉಡುಪಿ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನೀರುಪಾಲಾಗಿದ್ದ ಬಾಲಕಿ ಸನ್ನಿಧಿ ಮೃತದೇಹ ಪತ್ತೆಯಾಗಿದೆ. ನಿರುಪಾಲಾಗಿದ್ದ ಬಾಲಕಿ ಸನ್ನಿಧಿಗಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳ ಮೀನುಗಾರರು ಮತ್ತು ಸ್ಥಳೀಯರಿಂದ ಶೋಧಕಾರ್ಯ ನಡೆಯುತ್ತಿತ್ತು. ಇಂದು (ಆಗಸ್ಟ್ 10) ಸನ್ನಿಧಿ ಕಾಲು ಜಾರಿಬಿದ್ದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಅಂಗಾರ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ್ದಾರೆ.
ನಡೆದಿದ್ದೇನು?
(ಅಗಸ್ಟ್ 8) ರಂದು ಕಾಲು ಸಂಕ ದಾಟುವಾಗ ಎರಡನೇ ತರಗತಿಯ ವಿದ್ಯಾರ್ಥಿನಿ ಕಾಲು ಜಾರಿ ನೀರಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ನಡೆದಿತ್ತು. ಚಪ್ಪರಿಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ 7 ವರ್ಷದ ಸನ್ನಿಧಿಗಾಗಿ ಹುಡುಕಾಟ ನಡದಿತ್ತು.
ಸನ್ನಿಧಿ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ನೀರುಪಾಲಾದ ವಿದ್ಯಾರ್ಥಿನಿ ಸನ್ನಿಧಿ ಬೊಳಂಬಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ. ಮಕ್ಕಿಮನೆ ಪ್ರದೀಪ್ ಪೂಜಾರಿ, ಸುಮಿತ್ರಾ ದಂಪತಿ ಪುತ್ರಿ. ಬಾಲಕಿ ನಿವಾಸಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಬೈಂದೂರು ತಹಶೀಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಇಂದು ಬಾಲಕಿಯ ಮನೆಗೆ ಭೇಟಿ ನೀಡಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಊರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರ ಮುಂದೆ ಕಾಲ್ತೋಡು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು, ಅನೇಕ ಕಡೆಗಳಲ್ಲಿ ಹಾನಿಗಳು ಉಂಟಾಗಿವೆ. ಅದರಂತೆ 60ಕ್ಕೂ ಹೆಚ್ಚು ನಾಡದೋಣಿಗಳು ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೂ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿ, ಈಗಾಗಲೇ ಸಂಭವಿಸಿದ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.
ಬಾಲಕಿಯ ಸಾವಿಗೆ ಹೇತುವಾದ ಕಿರುಸೇತುವೆ ಹೇಗಿದೆ ಗೊತ್ತಾ? ಯಮನೊಂದಿಗೆ ಸೆಣೆಸುತ್ತಾ, ಮುರಿದ ಸೇತುವೆ ದಾಟುವ ದುಃಸ್ಥಿತಿ ಇಲ್ಲಿದೆ
ಸನ್ನಿಧಿಯ ಸಾವಿಗೆ ಕಾರಣವಾದ ಕಿರು ಸೇತುವೆ ಹೇಗಿದೆ ಗೊತ್ತಾ? ಮಕ್ಕಳು ಬಿಡಿ ದೊಡ್ಡವರಿಗೂ ಈ ಸೇತುವೆಯಲ್ಲಿ ನಡೆಯಲು ಸಾಧ್ಯವಿಲ್ಲ. ತಮ್ಮ ಕಷ್ಟ ಕಾಲಕ್ಕೆ ತಾವೇ ಮಾಡಿಕೊಂಡ ಸೇತುವೆಯಲ್ಲಿ ಜನ ನಿತ್ಯವೂ ಓಡಾಡಿ ಹೈರಾಣಾಗಿದ್ದಾರೆ. ಅಪಾಯಕಾರಿ ನೀರಿನ ಸೇತುವೆಯ ಮೇಲೆ ಜಾರುವ ಮರದ ದಿಮ್ಮಿಗಳಲ್ಲಿ ನಡೆದಾಡುವುದೇ ಒಂದು ಸಾಹಸಮಯ ಕೆಲಸ.
ಕಾಲ್ಪೋಡು ಗ್ರಾಮ ಮೂಲಭೂತ ಸೌಕರ್ಯದಿಂದಲೇ ವಂಚಿತವಾಗಿದೆ. ಇಲ್ಲಿನ ಗ್ರಾಮಸ್ಥರೇ ಹರಿಯುವ ನದಿಗೆ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಆದ್ರೆ ಅದರ ಸ್ಥಿತಿ ಈಗ ಮತ್ತಷ್ಟು ಹಾಳಾಗಿದೆ. ಸೇತುವೆ ಮುರಿದಿದೆ. ಮುರಿದ ಸೇತುವೆ ಮೇಲೆಯೇ ಪ್ರತಿ ದಿನ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಓಡಾಡುತ್ತಾರೆ. ಬೀಜಮಕ್ಕಿ ಪರಿಸರದಲ್ಲಿ ಇಂತಹ ಹತ್ತಕ್ಕೂ ಅಧಿಕ ಕಾಲು ಸಂಕಗಳಿವೆ. ಶಾಶ್ವತ ಸೇತುವೆ ನಿರ್ಮಾಣವೊಂದೇ ಸಮಸ್ಯೆಗೆ ಪರಿಹಾರವಾಗಿದೆ.
ಈಗಾಗಲೇ ಎರಡು ಕಡೆ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಆದ್ರೆ ಗ್ರಾಮಸ್ಥರು ಇನ್ನಷ್ಟು ಸೇತುವೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಾಗೂ ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ. ಶಾಲೆಯಿಂದ ಮನೆಗೆ ತೆರಳುವ ದಾರಿಯಲ್ಲಿ ಇದೇ ಮುರಿದ ಕಾಲು ಸಂಕವಿದೆ. ಈಗಾಗಲೇ ಹಲವಾರು ಮಂದಿ ನೀರಿಗೆ ಬಿದ್ದು ಬಚಾವಾಗಿದ್ದರು. ಇದೇ ಮೊದಲ ಬಾರಿಗೆ ಶಾಲಾ ಬಾಲಕಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಶಾಶ್ವತ ಸೇತುವೆ ಕಟ್ಟಿಕೊಡಲು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 10 August 22