ಉಡುಪಿ ಶ್ರೀ ಕಡಗೋಲು ಕೃಷ್ಣ ಮಠದಲ್ಲಿ ಪಾತ್ರೆ ತೊಳೆದು ಸರಳತೆ ಮೆರೆದ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿಯ ಶ್ರೀ ಕಡಗೋಲು ಕೃಷ್ಣ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಮಾನ್ಯ ಭಕ್ತೆಯಂತೆ ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಪುತ್ತಿಗೆ ಮಠದಿಂದ ಅವರಿಗೆ "ಭಾರತ ಲಕ್ಷ್ಮಿ" ಎಂಬ ಬಿರುದನ್ನು ನೀಡಲಾಯಿತು. ದೇಶದ ಸವಾಲುಗಳನ್ನು ಎದುರಿಸಲು ಕೃಷ್ಣನ ಅನುಗ್ರಹದ ಅಗತ್ಯವಿದೆ ಎಂದು ಅವರು ಹೇಳಿದರು. ಸಚಿವರ ಸರಳತೆ ಎಲ್ಲರ ಗಮನ ಸೆಳೆಯಿತು.
ಉಡುಪಿ, ಆಗಸ್ಟ್ 09: ಶ್ರಾವಣ ಪೂರ್ಣಿಮೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಆ.09) ಉಡುಪಿ ಶ್ರೀ ಕೃಷ್ಣದೇವರ ಮಠಕ್ಕೆ (Udupi Sri Krishna Mutt) ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಮಾನ್ಯ ಭಕ್ತೆಯಂತೆ ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪುತ್ತಿಗೆ ಮಠ ಅಪರೂಪದ ಬಿರುದು ನೀಡಿ ಗೌರವಿಸಿತು.
ದೇಶ ನಿತ್ಯವೂ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳನ್ನು ಹಿಮ್ಮೆಟ್ಟಿಸಲು ಕೃಷ್ಣನ ಅನುಗ್ರಹ ಬೇಕು ಎಂದು ಕೇಂದ್ರ ವಿತ್ತ ಸಚಿವೆ ಉಡುಪಿಯ ಕಡಗೋಲು ಕೃಷ್ಣನ ಸನ್ನಿಧಿಯಲ್ಲಿ ಹೇಳಿದರು. ಕೃಷ್ಣಮಠದ ನೂತನ ಯಾಳಿ ಉದ್ಘಾಟನೆ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿದ ಅವರು, ದೇಶದ ರಕ್ಷಣೆ ಹಾಗೂ ಪ್ರಧಾನಿಯ ಕೈ ಬಲಪಡಿಸಲು ಕೃಷ್ಣನ ಆಶೀರ್ವಾದ ಬೇಕು. ಈ ದಿನ ನಾನು ಭಾವುಕಳಾಗಿದ್ದೇನೆ. ರಕ್ಷಾ ಬಂಧನದ ದಿನವೇ ಕೃಷ್ಣನ ಆಶೀರ್ವಾದ ಪಡೆಯಲು ಬಂದಿದ್ದೇನೆ. ಪ್ರತಿಯೊಬ್ಬರು ದೇಶದ ಏಳಿಗೆಗಾಗಿ ಪ್ರಾರ್ಥಿಸಿ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇದನ್ನೂ ಓದಿ: ಶೃಂಗೇರಿ ಶಾರದಾ ಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಇಲ್ಲಿದೆ ಫೋಟೋಸ್
ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂಲ ಹೆಸರು ರುಕ್ಮಿಣಿ, ಉಡುಪಿಯ ಕೃಷ್ಣದೇವರು ರುಕ್ಮಿಣಿಯಿಂದ ಪೂಜಿಸಲ್ಪಟ್ಟ ವಿಗ್ರಹ ಎಂಬ ಪ್ರತೀತಿ ಇದೆ. ದೇಶದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತ ಲಕ್ಷ್ಮಿ ಎಂದು ಬಿರುದು ನೀಡುವುದಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಘೋಷಿಸಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಾಮಾನ್ಯ ಗೃಹಣಿಯಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾದರು. ತಮ್ಮ ಸರಳತೆಯಿಂದ ಗಮನ ಸೆಳೆಯುವ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸಾತ್ ನೀಡಿದರು.
ಕೃಷ್ಣನ ಸಮ್ಮುಖದಲ್ಲಿರುವ ಚಂದ್ರ ಶಾಲೆಯಲ್ಲಿ ಕುಳಿತು ಇಬ್ಬರೂ ಹೂವುಗಳನ್ನು ಪೋಣಿಸಿ ಮಾಲೆ ಮಾಡಿ ಅರ್ಪಿಸಿದರು. ಬಳಿಕ ಕೃಷ್ಣದೇವರ ನೈವೇದ್ಯಕ್ಕೆ ಬಳಸುವ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆದಿಟ್ಟರು. ಜೊತೆಗೆ ಭೋಜನ ಶಾಲೆಯಲ್ಲಿ ಆಹಾರ ತಯಾರಿಸಿದರು.
ತಮ್ಮ ಸರಳತೆಯಿಂದ ಗಮನ ಸೆಳೆದ ವಿತ್ತ ಸಚಿವೆ, ಸ್ತ್ರೀ ಶಕ್ತಿಗೆ ಅವಕಾಶ ನೀಡುವ ಪರ್ಯಾಯ ಪುತ್ತಿಗೆ ಮಠದ ವಿಶೇಷ ಕಾರ್ಯಕ್ರಮಗಳಿಗೆ ಇದೇ ವೇಳೆ ಚಾಲನೆ ನೀಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Sat, 9 August 25



