Hijab Row: ಪರೀಕ್ಷೆ ಮುಂದೂಡಲು ಹಿಜಾಬ್ ಹೋರಾಟಗಾರ್ತಿಯರ ಆಗ್ರಹ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 23, 2022 | 4:12 PM

ನಮ್ಮ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಜಾಬ್ ವಿವಾದ ಒಂದು ರಾಜಕೀಯ ಆಟ ಎಂದು ಹಿಜಾಬ್ ಪರ ಇರುವ ವಿದ್ಯಾರ್ಥಿನಿಯರು ಹೇಳಿದರು.

Hijab Row: ಪರೀಕ್ಷೆ ಮುಂದೂಡಲು ಹಿಜಾಬ್ ಹೋರಾಟಗಾರ್ತಿಯರ ಆಗ್ರಹ
ವಿದ್ಯಾರ್ಥಿನಿ (ಪ್ರಾತಿನಿಧಿಕ ಚಿತ್ರ)
Follow us on

ಉಡುಪಿ: ನ್ಯಾಯಾಲಯವು ತೀರ್ಪು ನೀಡುವವರೆಗೆ ನಮ್ಮ ಪರೀಕ್ಷೆಗಳನ್ನು ಮುಂದಕ್ಕೆ ಹಾಕಬೇಕು ಎಂದು ನಗರದ ಹಿಜಾಬ್ ಹೋರಾಟಗಾರ್ತಿಯರು (Hijab Activists) ಒತ್ತಾಯಿಸಿದರು. ಮಾಧ್ಯಮಗಳ ಮುಂದೆ ಬಂದು ಮಾತನಾಡಿದ ಐವರು ಹಿಜಾಬ್ ಹೋರಾಟಗಾರ್ತಿಯರು ಹಿಜಾಬ್ ವಿವಾದವನ್ನು ರಾಜಕೀಯ ಹುನ್ನಾರ ಎಂದು ಬಣ್ಣಿಸಿದರು. ನಮ್ಮ ಮೇಲೆ ಮಾಡಿರುವ ಆರೋಪಗಳಿಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಜಾಬ್ ವಿವಾದ ಒಂದು ರಾಜಕೀಯ ಆಟ. ಎಲ್ಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಗಿದ್ದಾರೆ. ಹೀಗಾಗಿ ನ್ಯಾಯಾಲಯದ ತೀರ್ಪು ಬರುವವರೆಗೆ ಪ್ರಮುಖ ಪರೀಕ್ಷೆಗಳನ್ನು ನಡೆಸದಂತೆ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಕೋರಿದರು.

ಉಗ್ರರ ಜತೆ ಸಂಪರ್ಕದ ಕುರಿತು ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅವರು, ನಮ್ಮ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಹಿಜಾಬ್ ಪ್ರಕರಣದ ಬಳಿಕ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಮನೆಯವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಜಾಬ್ ವಿವಾದ ಒಂದು ಪೊಲಿಟಿಕಲ್ ಗೇಮ್ ಆಗಿದೆ ಎಂದು ಹೇಳಿದರು. ಪರೀಕ್ಷೆ ಮುಂದೂಡುವ ಕುರಿತು ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಪರೀಕ್ಷೆ ಮುಂದೂಡಿದರೆ ಉಳಿದವರಿಗೂ ಅಧ್ಯಯನಕ್ಕೆ ಸಮಯ ಸಿಗುತ್ತದೆ. ನಮ್ಮ ವಿವರ ಸೋರಿಕೆಯಾದ ನಂತರ, ಅಂದರೆ ಸುಮಾರು ಒಂದು ತಿಂಗಳಿಂದ ನಮಗೆ ಬೆದರಿಕೆ ಬರುತ್ತಿದೆ. ನಮ್ಮ ಜೊತೆ ಇದ್ದವರಿಗೆ ಹೊಡೆದಿದ್ದಾರೆ, ಹೋಟೆಲ್ ದ್ವಂಸ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೀಗಾಗಿಯೇ ನಾವು ಹೋರಾಟ ಮಾಡುತ್ತಿದ್ದೇವೆ. ಈ ವಿವಾದದಲ್ಲಿ ನಮ್ಮ ಕುಟುಂಬವನ್ನು ಮಧ್ಯೆ ತರಬೇಡಿ ಎಂದು ವಿನಂತಿಸಿದರು. ಪರೀಕ್ಷೆ ಮುಂದೂಡುವ ವಿಚಾರದಲ್ಲಿ ಸರ್ಕಾರದ ಜೊತೆಗೆ ಮಾತಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಷ್ಟೂ ಬೇಗ ಕೋರ್ಟ್​ ತೀರ್ಪು ಬರಬೇಕಿದೆ. ಹಿಜಾಬ್​ಗೆ ಅವಕಾಶ ನೀಡಬೇಕು ಎಂದು ಈ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಿದ್ಯಾರ್ಥಿನಿ ಸೋದರನ ಮೇಲೆ ಹಲ್ಲೆ

ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಅವರ ಕುಟುಂಬಕ್ಕೆ ಸೇರಿದ ಹೋಟೆಲ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ವಿದ್ಯಾರ್ಥಿನಿಯ ಸಹೋದರ ಸೈಫ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಲ್ಪೆಯ ಬಿಸ್ಮಿಲ್ಲಾ ಹೋಟೆಲ್‌ಗೆ ನುಗ್ಗಿ ಕಿಟಕಿಯ ಗಾಜುಗಳನ್ನು ಪುಡಿ ಮಾಡಿ, ಸೈಫ್‌ ಮೇಲೆ ಹಲ್ಲೆ ನಡೆಸಿದ ಗುಂಪು ಪರಾರಿಯಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ. ಹಿಜಾಬ್‌ಗಾಗಿ ಹೋರಾಟ ನಡೆಸಿದ್ದಕ್ಕೆ ಕಿಡಿಗೇಡಿಗಳು ನನ್ನ ಸೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಹಕ್ಕಿಗಾಗಿ ದನಿ ಎತ್ತುವುದು ತಪ್ಪೇ ಎಂದು ಹಿಜಾಬ್‌ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಟ್ವೀಟ್ ಮಾಡಿದ್ದರು. ಹಿಜಾಬ್‌ಗಾಗಿ ಹೋರಾಟ ನಡಸುತ್ತಿರುವ ಹಲವು ವಿದ್ಯಾರ್ಥಿನಿಯರು ಶಿಫಾಗೆ ಬೆಂಬಲ ಸೂಚಿಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 

ಇದನ್ನೂ ಓದಿ: Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್​ನಲ್ಲಿ ಎಜಿ ವಾದ

ಇದನ್ನೂ ಓದಿ: ಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?