ಉಡುಪಿಯಲ್ಲಿ ಮತ್ತೆ ರೆಕ್ಕೆ ಬಿಚ್ಚಿದ ಟೀಂ ಗರುಡ! ಬೀದಿಜಗಳ ಆಗಿ ಬದಲಾಯ್ತು ಒಳಜಗಳ
ಇದೇ ಶನಿವಾರ (ಮೇ 18) ಉಡುಪಿಯ ಕುಂಜಿಬೆಟ್ಟು ರಸ್ತೆಯಲ್ಲಿ ತಡರಾತ್ರಿ ಸಿನೀಮಿಯ ರೀತಿಯಲ್ಲಿ ಗ್ಯಾಂಗ್ ವಾರ್ವೊಂದು ನಡೆದಿತ್ತು. ಕಾರುಗಳ ಗುದ್ದಾಟ, ತಲವಾರು ಹಿಡಿದು ಬಡಿದಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಸಲಿಗೆ ಕಡಲನಗರಿಯಲ್ಲಿ ನಡೆದ ಗಲಾಟೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಉಡುಪಿ, ಮೇ.25: ಉಡುಪಿ(Udupi) ನಗರದ ಕುಂಜಿಬೆಟ್ಟುವಿನಲ್ಲಿ ಮೇ.18 ರ ರಾತ್ರಿ 2 ಗಂಟೆಯ ಹೊತ್ತಿಗೆ ಕುಂಜಿಬೆಟ್ಟು ರಸ್ತೆಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಈ ರೀತಿಯಾಗಿ ಕಾದಾಟ ನಡೆಸಿದೆ. ನಗರವೆಲ್ಲ ಪ್ರಶಾಂತವಾಗಿರುವ ಹೊತ್ತಿಗೆ ಕಾರುಗಳ ನಡುವೆ ಗುದ್ದಾಟ ಜೊತೆಗೆ ತಲವಾರು ಹಿಡಿದು ಬಡಿದಾಡುತ್ತಿರುವುದನ್ನುಕಂಡು ಸುತ್ತಲಿನ ಫ್ಲ್ಯಾಟ್ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಅಸಲಿಗೆ ಉಡುಪಿಯ ಕಾಪುವಿನಲ್ಲಿ ‘ಟೀಂ ಗರುಡ’(Team Garuda) ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದ ಪುಂಡರ ಗುಂಪೊಂದು ಗಾಂಜಾ, ದನ ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿತ್ತು.
ನಾಲ್ಕು ವರ್ಷದ ಹಿಂದೆ ಈ ತಂಡವನ್ನ ಹೆಡೆಮುರಿ ಕಟ್ಟಿದ್ದ ಎಸ್ಪಿ
ಸದಾ ತಲವಾರು, ಕತ್ತಿ, ಡ್ರ್ಯಾಗನ್ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ, ರೌಡಿಶೀಟರ್ ಆಶಿಕ್ ಎಂಬಾತನೇ ಕ್ಯಾಪ್ಟನ್ ಆಗಿದ್ದ. ನಾಲ್ಕು ವರ್ಷದ ಹಿಂದೆ ಅಂದಿನ ಎಸ್ಪಿ ಡಾ. ವಿಷ್ಣುವರ್ಧನ್ ಈ ತಂಡದ ಹೆಡೆಮುರಿ ಕಟ್ಟಿದ್ದರು. ಅದಾದ ನಂತರ ಈ ತಂಡದ ಒಳಜಗಳ ಹೆಚ್ಚಾಗಿತ್ತು. ಎರಡು ವಾರದ ಹಿಂದೆ ಆಶಿಕ್ ಮತ್ತು ಅಲ್ಫಾಝ್ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿದ್ದರಿಂದ “ರಾಜಿ ಆಗೋಣ, ಗಲಾಟೆ ಬೇಡ” ಬಾ ಎಂದು ಆಶಿಕ್‌ನನ್ನ ಅಲ್ಫಾಝ್ ಟೀಂ ಕರೆಸಿಕೊಂಡಿತ್ತು.
ಇದನ್ನೂ ಓದಿ:ಉಡುಪಿಯಲ್ಲಿ ನಡೆದಿದ್ದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ ನಡುವಿನ ಕಾದಾಟ: ಎಸ್ಪಿ, ಉಡುಪಿ
ಆಶಿಕ್ ಸಹಿತ ಮೂವರು ಅರೆಸ್ಟ್
ಆದ್ರೆ, ಅಲ್ಫಾಝ್ ವಿಷಯ ಗೊತ್ತಿದ್ದ ಆಶಿಕ್, ಕುಂಜಿಬೆಟ್ಟಿಗೆ ಬಂದವನೇ ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನ ಮಟ್ಟ ಹಾಕಲು ಅಲ್ಫಾಝ್ ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾರೆ. ಇಷ್ಟಾಗುತ್ತಲೇ ಆಶಿಕ್ ಕಡೆಯವರು ತಮ್ಮ ಸ್ವಿಫ್ಟ್ ಕಾರನ್ನ ಶರೀಫ್ ಎಂಬಾತನ ಮೇಲೆ ಹರಿಸಿದ್ದಾರೆ. ಈ ಘಟನೆ ಸಂಬಂಧ ಈಗಾಗಲೇ ಉಡುಪಿ ನಗರ ಪೊಲೀಸರು ಆಶಿಕ್ ಸಹಿತ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಇನ್ನು ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಘಟನೆ ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ರಾಜಕೀಯವಾಗಿಯೂ ಘಟನೆ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಎಸ್ಪಿ ಹೇಳಿದ್ದಿಷ್ಟು
ಘಟನೆ ಕುರಿತು ಮಾತನಾಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ ಅರುಣ್, ‘ಇದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ ನಡುವೆ ನಡೆದಿರುವ ಹೊಡೆದಾಟ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಅದರ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಡೆದಾಟದ ಸಮಯದಲ್ಲಿ ಬಳಕೆಯಾದ ಒಂದು ಕಾರು, ಎರಡು ಬೈಕ್ ಮತ್ತು ಚಾಕು, ತಲ್ವಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಅರೋಪಿಗಳು ನಾಪತ್ತೆಯಾಗಿದ್ದು, ಆದಷ್ಟು ಬೇಗ ಅವರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ