ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಂಚಿಸಿದ ಗ್ಯಾಂಗ್​; ದೂರು ದಾಖಲಾದರೂ ಕ್ರಮ ಕೈಗೊಳ್ಳದ ಪೊಲೀಸರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2023 | 2:51 PM

ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್​ಗಳಲ್ಲಿ ಸಾಲ ಪಡೆದು ಮೋಸ ಮಾಡುತ್ತಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಸಹಕಾರಿ ಬ್ಯಾಂಕ್​ನಲ್ಲಿ ಲೋನ್ ಪಡೆದು, ಅದೇ ಬ್ಯಾಂಕಿನ ಸಾಲಚುತ್ತಿ ದಾಖಲಾತಿಯನ್ನು ನಕಲಿಯಾಗಿ ಸೃಷ್ಟಿಸಿ ರಾಷ್ಟ್ರೀಕತ ಬ್ಯಾಂಕ್​ನಲ್ಲಿ ಮತ್ತೆ ಸಾಲ ಪಡೆದಿರುವ ಈ ತಂಡ, ಕಳೆದ ಕೆಲವು ವರ್ಷಗಳಿಂದ ಕುಂದಾಪುರ ಭಾಗದಲ್ಲಿ ಸಕ್ರಿಯವಾಗಿದೆ.

ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಂಚಿಸಿದ ಗ್ಯಾಂಗ್​; ದೂರು ದಾಖಲಾದರೂ ಕ್ರಮ ಕೈಗೊಳ್ಳದ ಪೊಲೀಸರು
ಕುಂದಾಪುರ ಬ್ಯಾಂಕ್​ ಮೋಸ
Follow us on

ಉಡುಪಿ, ಡಿ.02: ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್​ಗಳಲ್ಲಿ ಸಾಲ ಪಡೆದು ಮೋಸ ಮಾಡುತ್ತಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ(Kundapura)ದಲ್ಲಿ ನಡೆದಿದೆ. ಬುದ್ದಿವಂತರ ಜಿಲ್ಲೆಯಲ್ಲಿ  ಅಪರಾಧವನ್ನು ಕೂಡ ಬುದ್ಧಿವಂತಿಕೆಯನ್ನು ಉಪಯೋಗಿಸಿ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಸಹಕಾರಿ ಬ್ಯಾಂಕ್​ನಲ್ಲಿ ಸಾಲ ಪಡೆಯುವ ಉದ್ದೇಶಕ್ಕೆ ಜಾಗವನ್ನು ಅಡಮಾನವಾಗಿರಿಸಿ ಸಾಲ ಪಡೆದ ಈ ತಂಡ, ಕೆಲವೇ ತಿಂಗಳುಗಳಲ್ಲಿ ಸಾಲ ತೀರಿದೆ ಎನ್ನುವ ನಕಲಿ ದಾಖಲಾತಿಯನ್ನು ಸೃಷ್ಟಿಸಿ ಅದೇ ದಾಖಲಾತಿಗಳನ್ನು ಹಿಡಿದು ರಾಷ್ಟ್ರೀಕತ ಬ್ಯಾಂಕ್​ನಲ್ಲೂ ಕೂಡ ಸಾಲ ಪಡೆದಿದೆ. ಕುಂದಾಪುರ ನಗರದಲ್ಲಿರುವ ಹೋಲಿರೋಸರಿ ಸಹಕಾರಿ ಬ್ಯಾಂಕ್​ನ ಸಾಲಗಾರರಾದ ಈ ತಂಡದವರು, ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವುದು ದಾಖಲೆಗಳ ಮೂಲಕ ಸಾಬೀತಾಗಿದೆ.

ಈ ಬಗ್ಗೆ ಎರಡು ಬಾರಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದರೂ ಕೂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸ ಇದುವರೆಗೂ ಆಗಿಲ್ಲ ಎಂದು ಬ್ಯಾಂಕಿನವರ ದೂರಿದ್ದಾರೆ. ಬೈಂದೂರು ತಾಲೂಕು ಆಲೂರು ಮೂಲದ ಶ್ರೀರಾಮಬಾಯಿರಿ ಎನ್ನುವವರು, 2015 ರಲ್ಲಿ ಇದೇ ಹೋಲಿ ರೋಸರಿ ಬ್ಯಾಂಕ್​ನಲ್ಲಿ ತಮ್ಮ ಕುಟುಂಬದವರನ್ನೇ ಜಾಮೀನುದಾರರಾಗಿ ಮಾಡಿ ಸರಿ ಸುಮಾರು 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ತಮ್ಮ ಜಾಗವನ್ನು ಅಡಮಾನವಿರಿಸಿ ಸಾಲ ಪಡೆದಿದ್ದ ಶ್ರೀರಾಮಭಾಯಿರಿ. ಸಾಲವನ್ನು ಕೂಡ ಮರು ಪಾವತಿ ಮಾಡಿದೆ, ಬ್ಯಾಂಕ್​ನ ಹೆಸರಿನಲ್ಲಿ ಸಾಲಚುತ್ತಿ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಎಸ್ ಬಿ ಐ ಬ್ಯಾಂಕ್​ನಲ್ಲಿ ಸುಮಾರು 52 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.

ಇದನ್ನೂ ಓದಿ:ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

ಬ್ಯಾಂಕ್​ನವರು ec ಮೂಲಕ ಪರಿಶೀಲನೆ ನಡೆಸುವಾಗ ಆರೋಪಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ನಕಲಿ ದಾಖಲಾತಿ ಮತ್ತು ಬ್ಯಾಂಕ್​ಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಈ ಪ್ರಕರಣದ ಜಾಮೀನುದಾರರಾಗಿರುವ ಗುರುಪ್ರಸಾದ್ ಎನ್ನುವವನು ಕೂಡ ಇದೇ ಹೋಲಿರೋಸರಿ ಸಹಕಾರಿ ಬ್ಯಾಂಕ್​ನಿಂದ ನಕಲಿ ದಾಖಲೆ ಸೃಷ್ಟಿ ಮಾಡಿ ಕೆನರಾ ಬ್ಯಾಂಕ್​ನಲ್ಲಿ ಅದೇ ದಾಖಲಾತಿಗೆ ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ.

ಕ್ಯಾರೆ ಎನ್ನದ ಪೊಲೀಸರು

ಈ ಎರಡು ಪ್ರಕರಣಗಳ ಕುರಿತು ಪೊಲೀಸರಿಗೆ ದೂರು ನೀಡಿದರು ಕೂಡ ಇದುವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿ ಎರಡು ಬ್ಯಾಂಕ್​ಗಳಿಗೆ ಮೋಸ ಮಾಡಿರುವ ಆರೋಪಿಗಳು, ರಾಜಾರೋಷವಾಗಿ ಸಾರ್ವಜನಿಕವಾಗಿ ಐಷಾರಾಮಿ ಜೀವನವನ್ನು ನಡೆಸುತ್ತಾ ತಿರುಗಾಡಿಕೊಂಡಿದ್ದಾರೆ. ಆದರೆ, ಇತ್ತ ಸಾಲಕೊಟ್ಟ ಬ್ಯಾಂಕಿನವರು ಮಾತ್ರ ಸಾಲ ಮರುಪಾವತಿಯಾಗದೇ ಕಂಗಾಲಾಗಿದ್ದು, ನ್ಯಾಯಾಂಗದ ಮೊರೆ ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ