ಉಡುಪಿ: ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ರೈಲು ದುರಂತ
ಲೊಕೊ ಪೈಲಟ್ ಹಾಗೂ ರೈಲು ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಡುಪಿ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಪರಿಣಾಮವಾಗಿ ರೈಲು ಸಂಖ್ಯೆ 12619 ಮತ್ಸ್ಯಗಂಧ ಎಕ್ಸ್ಪ್ರೆಸ್ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ. ಸಿಬ್ಬಂದಿಯ ವೃತ್ತಿಪರತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಉಡುಪಿ, ಜುಲೈ 24: ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ಬಾರ್ಕೂರು-ಉಡುಪಿ ಮಧ್ಯೆ ಸಂಭವನೀಯ ರೈಲು ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರ ಪ್ರಾಣ ಉಳಿಸಿದ ಸಿಬ್ಬಂದಿಯನ್ನು ಇದೀಗ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದೆ.
ರೈಲು ಸಂಖ್ಯೆ 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬಾರ್ಕೂರು-ಉಡುಪಿ ಸೆಕ್ಷನ್ ಮಧ್ಯೆ ಚಲಿಸುತ್ತಿದ್ದಾಗ ಹಳಿಗೆ ಅಡ್ಡಲಾಗಿ ದೊಡ್ಡ ಮರವೊಂದು ಬಿದ್ದಿರುವುದನ್ನು ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಗಮನಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಅವರು ತುರ್ತು ಬ್ರೇಕ್ ಹಾಕಿದರು. ಪರಿಣಾಮವಾಗಿ ಲೊಕೊಮೊಟಿವ್ ಮತ್ತು ಒಂದು ಕೋಚ್ ಹಾದುಹೋಗುವಷ್ಟರಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ಸಂಭಾವ್ಯ ದುರಂತವೊಂದು ತಪ್ಪಿತು.
ನಂತರ ಅಡೆತಡೆಯನ್ನು ಓವರ್‌ಹೆಡ್ ಉಪಕರಣ (OHE) ತಂಡವು ತೆರವುಗೊಳಿಸಿತು. ಬಳಿಕ ರೈಲು ಪ್ರಯಾಣ ಪುನರಾರಂಭಗೊಂಡಿತು
ಸಂಭಾವ್ಯ ಭಾರಿ ಅನಾಹುತವನ್ನು ತಪ್ಪಿಸಿದ ವೃತ್ತಿಪರತೆಯನ್ನು ಗುರುತಿಸಿ, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಸಿಎಂಡಿ ಸಂತೋಷ್ ಕುಮಾರ್ ಝಾ ಸಿಬ್ಬಂದಿಗೆ ತಲಾ 15,000 ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಪೆರ್ಡೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಜುಲೈ 22 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:20 ರ ನಡುವೆ ಈ ಘಟನೆ ಸಂಭವಿಸಿದೆ. ಪೆರ್ಡೂರು ಗ್ರಾಮದ ನಿವಾಸಿ ನಯನಾ (17) ಮೃತ ಬಾಲಕಿಯಾಗಿದ್ದಾಳೆ.
ಇದನ್ನೂ ಓದಿ: ಭಾರೀ ಮಳೆ ಕೊಂಕಣ ರೈಲ್ವೆ ಸೇವೆ ಸ್ಥಗಿತ; ಮಂಗಳೂರು ಎಕ್ಸ್‌ಪ್ರೆಸ್, ಮತ್ಸ್ಯ ಗಂಧ ರೈಲು ಸಂಚಾರ ಬಂದ್
ನಯನಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಮನೆಯ ಮೇಲ್ಮಹಡಿಯ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ಚೂಡಿದಾರ್ ಕಟ್ಟಿಕೊಂಡು ನೇಣು ಬಿಗಿದುಕೊಂಡಿದ್ದಳು. ಘಟನೆ ಕುರಿತು ಆಕೆಯ ತಾಯಿ ಶೋಬಾ ದೂರು ನೀಡಿದ್ದು, ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Wed, 24 July 24