ನಾಳೆ ಉಡುಪಿ ಜಿಲ್ಲಾಡಳಿತ ಮುಂದೆ ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿ
ನಕ್ಸಲೈಟ್ ಚಟುವಟಿಕೆಗಳಿಂದ ದೂರ ಉಳಿದು ಒಂದೂವರೆ ದಶಕಗಳಿಂದ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ತೊಂಬಟ್ಟು, ಕರ್ನಾಟಕದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಶರಣಾಗುವುದಾಗಿ ಘೋಷಿಸಿದ್ದಾರೆ. ನಾಳೆ ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಿಗ್ಗೆ 10:30ಕ್ಕೆ ಶರಣಾಗತಿಯಾಗಲಿದ್ದಾರೆ. ಇದಕ್ಕಾಗಿ ನಕ್ಸಲ್ ಕಮಿಟಿ ಸದಸ್ಯ ಶ್ರೀಪಾಲ್ ನೇತೃತ್ವದ ತಂಡ ಅವರನ್ನು ಕರೆತರುತ್ತಿದೆ.

ಉಡಿಪಿ, ಜನವರಿ 01: ಎರಡೂವರೆ ದಶಕದಿಂದ ಕಾಡೊಳಗೆ ಇದ್ದುಕೊಂಡೇ ಹೋರಾಟ ನಡೆಸುತ್ತಿದ್ದ ಮೋಸ್ಟ್ ವಾಂಟೆಡ್ ಆರು ನಕ್ಸಲರು (Naxal) ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಇದೀಗ ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿಗೆ ಮುಂದಾಗಿದ್ದಾರೆ. ನಾಳೆ ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ನಕ್ಸಲ್ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿದ್ದಾರೆ. ನಕ್ಸಲ್ ಕಮಿಟಿ ಸದಸ್ಯ ಶ್ರೀಪಾಲ್ ನೇತೃತ್ವದ ತಂಡದಿಂದ ಶರಣಾಗತಿ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಯಾರಿದು ಲಕ್ಷ್ಮೀ ತೊಂಬಟ್ಟು?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆ ಬೈಲು ಸಮೀಪದ ತೊಂಬಟ್ಟು ಗ್ರಾಮದ ನಿವಾಸಿ ಲಕ್ಷ್ಮೀ ತೊಂಬಟ್ಟು, ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಗಳ ಆರು ಮಕ್ಕಳ ಪೈಕಿ ಐದನೆಯವರು. 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ತನ್ನ ಗ್ರಾಮದ ಸಾಮಾಜಿಕ ಚಳುವಳು, ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ನಕ್ಸಲ್ ಗುಂಪಿನಲ್ಲಿ ಹಾಡುಗಾರ್ತಿಯಾಗಿಯೂ ಲಕ್ಷ್ಮೀ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ರಾಜ್ಯದಲ್ಲಿ ಉಳಿದಿದ್ದ ಏಕೈಕ್ ನಕ್ಸಲ್ ಶರಣಾಗತಿ, ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
2006ರ ಮಾರ್ಚ್ 6ರಿಂದ ಕಣ್ಮರೆಯಾದ ಲಕ್ಷ್ಮೀ, ಆಂಧ್ರದಲ್ಲಿ ಸಕ್ರಿಯರಾಗಿದ್ದರು. ಬಳಿಕ ಮಾಜಿ ನಕ್ಸಲ್ ಸಂಜೀವ್ ಅಲಿಯಾಸ್ ಸಲೀಂ ಜತೆ ವಿವಾಹವಾಗಿದ್ದು, ನಕ್ಸಲ್ ಚಟುವಟಿಕೆ ಬಿಟ್ಟು ಆಂಧ್ರದಲ್ಲಿ ಜೀವನ ನಡೆಸುತ್ತಿದ್ದರು.
ಲಕ್ಷ್ಮೀ ಪತಿ ಸಂಜೀವ್ ಸದ್ಯ ನಕ್ಸಲ್ ಚಟುವಟಿಕೆ ಬಿಟ್ಟು ಮುಖ್ಯ ವಾಹಿನಿಗೆ ಬಂದಿದ್ದಾರೆ. ಹಾಗಾಗಿ ನಕ್ಸಲ್ ಮಹಿಳೆ ಲಕ್ಷ್ಮೀ ತೊಂಬಟ್ಟು ಸಹ ಶರಣಾಗುವ ಸಾಧ್ಯತೆ ಇದೆ. ಸದ್ಯ ಕರ್ನಾಟಕದ ಅಮಾವಾಸ್ಯೆ ಬೈಲು ಠಾಣೆಯಲ್ಲಿ ಲಕ್ಷ್ಮೀ ವಿರುದ್ಧ ಬೆದರಿಕೆ ಕರಪತ್ರ ಹಂಚಿಕೆ ಸೇರಿದಂತೆ 3 ಪ್ರಕರಣ ದಾಖಲಾಗಿವೆ.
ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿರುವ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಒಂದುವರೆ ದಶಕದಿಂದ ಲಕ್ಷ್ಮೀ ಮನೆಗೆ ಬಂದಿಲ್ಲ. ಆಂಧ್ರ ಪ್ರದೇಶದಲ್ಲಿ ಲಕ್ಷ್ಮೀಯ ಪತಿ ಶರಣಾಗತಿ ಆಗಿದ್ದಾರೆ. ಲಕ್ಷ್ಮೀಯ ಪತಿ ಸಂಜೀವ್ ಈಗಾಗಲೇ ಶರಣಾಗತಿಯಾಗಿ ಖುಲಾಸೆಗೊಂಡು ಮುಖ್ಯ ವಾಹಿನಿಯಲ್ಲಿದ್ದಾರೆ. ಪತಿಯ ಶರಣಾಗತಿ ನಂತರ ಕುಟುಂಬದವರೊಂದಿಗೆ ಲಕ್ಷ್ಮೀ ಸಂಪರ್ಕದಲ್ಲಿದ್ದರು.
ಇದನ್ನೂ ಓದಿ: 6 ನಕ್ಸಲರ ಶರಣಾಗತಿ ಬೆನ್ನಲ್ಲೇ ನಕ್ಸಲರ ಪಟ್ಟಿಯಲ್ಲಿ ಉಳಿದ ಏಕೈಕ ನಕ್ಸಲ್
ಫೋನ್ ಸಂಪರ್ಕದ ಮೂಲಕ ಅಣ್ಣ ಹಾಗೂ ಅಕ್ಕನ ಜೊತೆ ಸಂಪರ್ಕದಲ್ಲಿದ್ದರು. ಅಣ್ಣ ವಿಠಲ ಪೂಜಾರಿ ಮತ್ತು ಸಹೋದರಿ ರಾಜೀವಿ ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ, ತಾಯಿ ತೀರಿಕೊಂಡಾಗಲೂ ಲಕ್ಷ್ಮೀ ಬಂದಿರಲಿಲ್ಲ. ಮನೆಯ ಶುಭಕಾರ್ಯ ಹಾಗೂ ಸಾವಿನ ವೇಳೆ ಅಲರ್ಟ್ ಆಗಿದ್ದ ಪೊಲೀಸರು, ಲಕ್ಷ್ಮೀ ಮನೆಗೆ ಬರಬಹುದು ಎಂದು ಪೊಲೀಸರು ಕಾದಿದ್ದರು.
ಕಳೆದ ಕೆಲವು ವರ್ಷಗಳಿಂದ ಮನೆಯವರಿಗೆ ಪೊಲೀಸರಿಂದ ಕಿರುಕುಳ ತಪ್ಪಿತ್ತು. ಲಕ್ಷ್ಮೀ ನಕ್ಸಲ್ ಚಟುವಟಿಕೆ ಬಿಟ್ಟು ಒಂದುವರೆ ದಶಕ ಕಳೆದಿದೆ. ಲಕ್ಷ್ಮೀ ವಾಪಸ್ ಆಗುವ ಬಗ್ಗೆ ತಿಳಿದು ಕುಟುಂಬದವರಿಗೆ ಸಂತೋಷವಾಗಿದೆ. ಕರ್ನಾಟಕದಲ್ಲಿ ಕೇಸ್ ಇರುವ ಕಾರಣ ಇದೀಗ ಶರಣಾಗತಿ ಪ್ರಕ್ರಿಯೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.