ಶಾಲೆಗಳಲ್ಲಿ ಮೊಟ್ಟೆ ನೀಡಿಕೆಗೆ ಪೇಜಾವರ ಶ್ರೀ ವಿರೋಧ, ಮತಾಂತರ ನಿಷೇಧ ಕಾನೂನು ಜಾರಿಗೆ ಆಗ್ರಹ

ಯಾರಿಗೆ ಯಾವುದನ್ನು ಸೇವಿಸಲು ಇಷ್ಟವಿದೆಯೋ ಅದನ್ನು ಸೇವಿಸಲಿ. ಸರ್ಕಾರ ಅದರ ಖರ್ಚು ವಹಿಸಿಕೊಳ್ಳಲಿ ಎಂದು ಸಲಹೆ ಮಾಡಿದರು.

ಶಾಲೆಗಳಲ್ಲಿ ಮೊಟ್ಟೆ ನೀಡಿಕೆಗೆ ಪೇಜಾವರ ಶ್ರೀ ವಿರೋಧ, ಮತಾಂತರ ನಿಷೇಧ ಕಾನೂನು ಜಾರಿಗೆ ಆಗ್ರಹ
ವಿಶ್ವಪ್ರಸನ್ನ ತೀರ್ಥಶ್ರೀ
Edited By:

Updated on: Dec 09, 2021 | 5:31 PM

ಉಡುಪಿ: ಮಧ್ಯಾಹ್ನ ಬಿಸಿಯೂಟ ಯೋಜನೆಯ ಭಾಗವಾಗಿ ಸರ್ಕಾರವು ಮೊಟ್ಟೆಯನ್ನೂ ನೀಡಲು ಮುಂದಾಗಿರುವ ಬೆಳವಣಿಗೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ. ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮ್ಮ ಪರಂಪರೆಯ ಭಾಗವಾಗಿರುವ ಆಹಾರ ಕ್ರಮವನ್ನು ಬದಲಿಸಬಾರದು. ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಹಲವರ ನಂಬಿಕೆಗಳಿಗೆ ಧಕ್ಕೆಯುಂಟಾಗುತ್ತದೆ. ಶಾಲೆ ಇರುವುದು ಶಿಕ್ಷಣ ನೀಡಲೆಂದು. ಯಾವುದೇ ಸಮುದಾಯದ ಜೀವನಶೈಲಿಯನ್ನು ಬದಲಿಸಬಾರದು. ಯಾರಿಗೆ ಯಾವುದನ್ನು ಸೇವಿಸಲು ಇಷ್ಟವಿದೆಯೋ ಅದನ್ನು ಸೇವಿಸಲಿ. ಸರ್ಕಾರ ಅದರ ಖರ್ಚು ವಹಿಸಿಕೊಳ್ಳಲಿ ಎಂದು ಸಲಹೆ ಮಾಡಿದರು.

ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಮತಾಂತರದ ಹಾವಳಿಯನ್ನು ಸರ್ಕಾರ ನಿಗ್ರಹಿಸಬೇಕು. ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಒತ್ತಡ, ಆಮಿಷ ಅಥವಾ ಬಲವಂತದಿಂದ ಮತಾಂತರ ಮಾಡಿದರೆ ಸಹಿಸಲು ಆಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದರು. ಮಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರದ ಹಾವಳಿಯೂ ಇಡೀ ಮನೆಯನ್ನೇ ಬಲಿತೆಗೆದುಕೊಂಡಿದೆ. ಈ ಹಾವಳಿಯನ್ನು ಕಾನೂನಿನ ಮೂಲಕ ನಿಗ್ರಹಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಆತ್ಮಹತ್ಯೆಗೆ ಮತಾಂತರವೇ ಕಾರಣ ಎಂಬ ಅಂಶವೂ ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಆತ್ಮಹತ್ಯೆ ಮಾಡಿಕೊಂಡ ಮನೆಯ ಯಜಮಾನ, ಮೃತ ನಾಗೇಶ್ ಮಹಿಳೆಯೊಬ್ಬರ ಹೆಸರು ಉಲ್ಲೇಖಿಸಿದ್ದರು. ಆಕೆಯೇ ನಮ್ಮ ಸಾವಿಗೆ ಕಾರಣ. ನನ್ನ ಪತ್ನಿಯನ್ನು ತನ್ನ ಧರ್ಮಕ್ಕೆ ಮತಾಂತರ ಮಾಡಿದ್ದಳು. ಹೀಗಾಗಿ ವಿಜಯಲಕ್ಷ್ಮಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಾಗೇಶ್​ ಡೆತ್ ನೋಟ್ (death note) ಬರೆದಿಟ್ಟಿದ್ದರು.

ಗಂಡ ನೇಣು ಹಾಕಿಕೊಂಡು ಮೃತಪಟ್ಟಿದ್ದರೆ, ಹೆಂಡತಿ ಮತ್ತು ಮಕ್ಕಳಿಗೆ ವಿಷ ಕೊಟ್ಟು ಸಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ನಾಗೇಶ್ ಸದೇರಿಗುಪ್ಪೆ (30), ವಿಜಯಲಕ್ಷಿ (26), ಸಪ್ನ (8) ಮತ್ತು ಸಮಂತ್ (4) ಮೃತರು. ಇವರುಗಳು ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರು. ನಾಗೇಶ್ ಡ್ರೈವರ್ ಆಗಿ, ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು: ಪೇಜಾವರ ಶ್ರೀಗಳ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ
ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ -ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ