ಶ್ರೀ ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವ ಕನಸು ಕೈಗೂಡಿದೆ. ಕೋಟಿ ಕೋಟಿ ಭಕ್ತರ ರಾಮಸೇವೆ ಮಾಡುವ ಕನಸು ನೇರವೇರುವುದಕ್ಕೆ ಪೇಜಾವರ ಶ್ರೀಗಳು ಉದಾತ್ತ ಸೇವಾ ಮಾರ್ಗ ಸೂಚಿಸಿದ್ದಾರೆ. ಹತ್ತು ಲಕ್ಷ ರೂಪಾಯಿ ಮೌಲ್ಯದ ಸಮಾಜ ಸೇವೆ ಕಾರ್ಯಕೈಗೊಂಡ ದಾನಿಗಳಿಗೆ ಅಯೋಧ್ಯೆ ರಾಮನ ರಜತ ಕಲಶ ಅಭಿಷೇಕ ಸೇವೆ ಭಾಗ್ಯ ಲಭ್ಯವಾಗಲಿದೆ.
ಹೌದು ಅಯೋಧ್ಯೆ ರಾಮನ ಸೇವೆ ನಡೆಸಿ ಕೃಪೆಗೆ ಪಾತ್ರವಾಗುವ ಕನಸು ಕೋಟ್ಯಾಂತರ ಭಕ್ತರಲ್ಲಿದೆ. ರಾಮಸೇವೆ ರೂಪದಲ್ಲಿ ಬಡವರ, ಗೋವುಗಳ ಸೇವೆ ಮಾಡುವಂತೆ ಪೇಜಾವರ ಶ್ರೀಗಳು ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ತಮ್ಮ ತಮ್ಮ ಊರಿನ ವಸತಿರಹಿತರಿಗೆ ಮನೆ ಕಟ್ಟಿಸಿಕೊಡಿ, ನೊಂದವರಿಗೆ, ಅನಾರೋಗ್ಯಪೀಡಿತ ಬಡ ಕುಟುಂಬಗಳಿಗೆ ನೆರವಾಗಿ ಎಂದು ಪೇಜಾವರ ಶ್ರೀ ಸಲಹೆ ನೀಡಿದ್ದಾರೆ.
ಹೀಗೆ ಪೇಜಾವರ ಶ್ರೀ ಅವರು ಕರೆ ನೀಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹಲವು ಮಂದಿ ಮನೆ ಕಟ್ಟಿಸಲು ಮುಂದಾಗಿದ್ದಾರೆ. ಉಡುಪಿ ಶಾಸಕ ಯಶಪಾಲ ಸುವರ್ಣ ನೇತೃತ್ವದಲ್ಲಿ ಒಂದು ಮನೆ ನಿರ್ಮಾಣಗೊಂಡಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಕಿಣಿ ಎಂಬವರು ಬಡ ಕುಟುಂಬಗಳಿಗೆ ಎರಡು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಮಾಜಿ ಶಾಸಕ ರಘುಪತಿ ಭಟ್ ಕೂಡ ಮನೆ ನಿರ್ಮಾಣ ಮಾಡಿದ್ದಾರೆ. ಶ್ರೀಗಳ ಕರೆಗೆ ಅನುಗುಣವಾಗಿ ಈಗಾಗಲೇ ಬೇರೆ ದಾನಿಗಳಿಂದ 25 ಮನೆಗಳು ನಿರ್ಮಾಣ ಹಂತದಲ್ಲಿವೆ. ಪ್ರಾರಂಭಿಕ ಹಂತದಲ್ಲಿ 180 ಮನೆ ಕಟ್ಟಿಸಲು ಯೋಜಿಸಲಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರದಲ್ಲಿ ಯಾವುದೇ ಪೂಜಾ ಸೇವೆಗಳು ಇರುವುದಿಲ್ಲ. ಅದ್ರೆ ಜನವರಿ 22 ರಿಂದ ಶ್ರೀ ರಾಮನಿಗೆ ಸಹಸ್ರ ಕಲಶಾಭಿಷೇಕ ನಡೆಯುತ್ತಿದೆ. ಹಾಗಾಗಿ ಶ್ರೀ ರಾಮನಿಗೆ ಸೇವೆ ಮಾಡಲೇ ಬೇಕು ಎಂದು ಇಚ್ಛೆ ಇದ್ದವರಿಗೆ ರಜತ ಕಲಶ ಅಭಿಷೇಕ ಸೇವೆ ಅವಕಾಶ ದೊರಕಲಿದೆ.
ಆದ್ರೆ ರಜತ ಕಲಶಾಭಿಷೇಕ ನಡೆಸಬೇಕು ಎಂಬ ಅಭಿಲಾಷೆ ಇದ್ದರೆ 10 ಲಕ್ಷ ರೂಪಾಯಿಗಳ ಸಮಾಜ ಸೇವೆ ಕಾರ್ಯ ನಡೆಸಿರಬೇಕು. ಅಂತಹ ಸೇವೆ ಮಾಡಿದ ಭಕ್ತರ ಹೆಸರಿನಲ್ಲಿ ಒಂದು ರಜತ ಅಭಿಷೇಕ ಸಲ್ಲಿಸಿ ರಜತ ಕಲಶ ಸೇವಾಕರ್ತನಿಗೆ ಹಿಂದಿರುಗಿಸಲಾಗುತ್ತದೆ.
ಹತ್ತು ಲಕ್ಷ ರೂಪಾಯಿ ಮೌಲ್ಯದ ಸಮಾಜ ಸೇವೆ ಮಾಡಿರುವ ಬಗೆ ಸ್ಥಳೀಯ ಶಾಸಕ, ಸಂಸದ, ತಹಶೀಲ್ದಾರ್ ಪ್ರಮಾಣ ಪತ್ರ, ಗೆಜೆಟೆಡ್ ಆಫೀಸರ್ ರಿಂದ ಪ್ರಮಾಣ ಪತ್ರ ತಂದವರಿಗೆ ರಜತ ಕಲಶ ಸೇವೆ ಮಾಡುವ ಭಾಗ್ಯ ಕಲ್ಪಿಸಲು ಅವಕಾಶವಿದೆ. ಇಂತಹ ಉದಾತ್ತ ಸೇವಾ ಮಾರ್ಗದ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಲು ಶ್ರೀಗಳು ಹೊಸ ತಳಹದಿ ಹಾಕಿಕೊಟ್ಟಿದ್ದಾರೆ ಎಂದು ಈಗಾಗಲೇ ಇಂತಹ ಸೇವೆ ನೀಡಿರುವ ರಾಘವೇಂದ್ರ ಕಿಣಿ ಟಿವಿ9 ಗೆ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:48 pm, Mon, 5 February 24