ಭಾರತೀಯ ಸೈನ್ಯಕ್ಕೆ ಸೇರಲು ತರಬೇತಿ; ಗ್ರಾಮೀಣ ಭಾಗದ ಯುವಕರಿಗೆ ದೈಹಿಕ ಮತ್ತು ಲಿಖಿತ ಪರೀಕ್ಷೆ ಬಗ್ಗೆ ಮಾಹಿತಿ
ಬೆಳಗ್ಗೆ 5.30 ಯಿಂದ 8.30 ವರೆಗೂ ದೈಹಿಕ ಪರೀಕ್ಷೆಗೆ ತರಬೇತಿ ನಡೆಯುತ್ತಿದೆ. ದೈಹಿಕ ಕಸರತ್ತುಗಳ ತರಬೇತಿ ನೀಡುವುದರ ಜೊತೆಗೆ, ಸೈನ್ಯಕ್ಕೆ ಸೇರಲು ಅಗತ್ಯವಾದ ಲಿಖಿತ ಪರೀಕ್ಷೆಗಳು ಯಾವ ರೀತಿಯಲ್ಲಿ ನಡೆಯುತ್ತದೆ, ಅದರ ತಯಾರಿ ಹೇಗೆ ಎನ್ನುವ ಬಗ್ಗೆಯೂ ಮಾಜಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ.
ಉಡುಪಿ: ಸೈನ್ಯಕ್ಕೆ ಸೇರಬೇಕು, ದೇಶ ಕಾಯಬೇಕು ಎನ್ನುವುದು ಅನೇಕ ಮಂದಿ ಗ್ರಾಮೀಣ ಯುವಕರ ಕನಸು. ಆದರೆ ಸೈನ್ಯ ಸೇರುವ ಬಗ್ಗೆ ಮಾಹಿತಿ, ದೈಹಿಕ ತರಬೇತಿ ಇಲ್ಲದೇ ಹೆಚ್ಚಿನವರ ಕನಸು ನನಸಾಗುವುದೇ ಇಲ್ಲ. ಇದಕ್ಕಾಗಿಯೇ ದೇಶ ಪ್ರೇಮಿಗಳ ತಂಡವೊಂದು, ಸೈನ್ಯಕ್ಕೆ ಸೇರಲು ಆಸಕ್ತಿ ಇರುವ ಯುವಕರನ್ನು ತಯಾರು ಮಾಡುತ್ತಿದ್ದಾರೆ. ಆ ಮೂಲಕ ಸೈನ್ಯಕ್ಕೆ ಸೇರಲು ಹುರಿದುಂಬಿಸುತ್ತಿದ್ದಾರೆ.
ದೇಶ ಕಾಯುವ ವೀರ ಯೋಧರ ಸೇವೆಯೂ ಅಷ್ಟೇ ಪ್ರಾಧಾನ್ಯವಾಗಿದ್ದು, ತಾಯಿ ಭಾರತಾಂಬೆಯ ಕಾಯುವ ಕಾಯಕ ಮಾಡಬೇಕು ಎನ್ನುವುದು, ದೇಶ ಪ್ರೇಮಿಗಳ ಆಸೆ. ಜೀವನದ ಮಹತ್ವದ ಗುರಿಯು ಹೌದು. ಆದರೆ ಗ್ರಾಮೀಣ ಭಾಗದ ತರುಣರು ಸೈನಕ್ಕೆ ಸೇರುವ ಕನಸು ಕಾಣುತ್ತಾರೆ ಹೊರತು, ಅದು ಹೆಚ್ಚಿನವರಿಗೆ ಸಾಕಾರ ಆಗುವುದಿಲ್ಲ.
ಸೈನ್ಯಕ್ಕೆ ಆಯ್ಕೆ ಆಗುವ ಮೊದಲು ಎದುರಿಸುವ, ದೈಹಿಕ ಹಾಗೂ ಲಿಖಿತ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಉಡುಪಿ ಜಿಲ್ಲೆಯ ಬೈಂದೂರು ಭಾಗದ ಯುವಕರ, ಸೈನ್ಯ ಸೇರುವ ಕನಸನ್ನು ನನಸು ಮಾಡುತ್ತಿದೆ ಬೈಂದೂರು ನೇಷನ್ ಲವರ್ ತಂಡ. ಉದ್ಯಮಿ ಬಾಬು ಪೂಜಾರಿ ಬೈಂದೂರು ಅವರ ಸಹಕಾರದಲ್ಲಿ ಪ್ರಸಾದ್ ದೇವಾಡಿಗ ಅವರ ನೇತೃತ್ವದಲ್ಲಿ, ಬೈಂದೂರಿನ ನೂರಾರು ವಿದ್ಯಾರ್ಥಿಗಳಿಗೆ ಬೆಳಗ್ಗೆ ಮೈದಾನದಲ್ಲಿ ಸೈನ್ಯಕ್ಕೆ ಸೇರುವ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಬೆಳಗ್ಗೆ 5.30 ಯಿಂದ 8.30 ವರೆಗೂ ದೈಹಿಕ ಪರೀಕ್ಷೆಗೆ ತರಬೇತಿ ನಡೆಯುತ್ತಿದೆ. ದೈಹಿಕ ಕಸರತ್ತುಗಳ ತರಬೇತಿ ನೀಡುವುದರ ಜೊತೆಗೆ, ಸೈನ್ಯಕ್ಕೆ ಸೇರಲು ಅಗತ್ಯವಾದ ಲಿಖಿತ ಪರೀಕ್ಷೆಗಳು ಯಾವ ರೀತಿಯಲ್ಲಿ ನಡೆಯುತ್ತದೆ, ಅದರ ತಯಾರಿ ಹೇಗೆ ಎನ್ನುವ ಬಗ್ಗೆಯೂ ಮಾಜಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ. ವಿವಿಧ ರೀತಿಯ ದೈಹಿಕ ತರಬೇತಿ ನೀಡಿ, ಯುವಕರನ್ನು ಸದೃಡರಾಗಿನ್ನಾಗಿ ಮಾಡಲಾಗುತ್ತಿದೆ.
ಒಟ್ಟಿನಲ್ಲಿ, ಸೈನ್ಯ ಸೇರಬೇಕು ಎನ್ನುವ ಸುಂದರ ಕನಸು ಕಟ್ಟಿಕೊಂಡ ಯುವಕರಿಗೆ ಈ ರೀತಿಯಲ್ಲಿ ತರಬೇತಿ, ಮಾಹಿತಿ ಸಿಕ್ಕಿದರೆ, ತಾಯಿ ಭಾರತಿ ಸೇವೆ ಮಾಡಲು ಹಳ್ಳಿ ಹಳ್ಳಿಯಿಂದಲೂ ಯುವಕರು ಮುಂದೆ ಬರುತ್ತಾರೆ. ಭವ್ಯ ಭಾರತದ ಬಲಿಷ್ಠ ಸೈನ್ಯಕ್ಕೆ ಗ್ರಾಮೀಣ ಯುವಕ ಸೇವೆಯೂ ಸಿಕ್ಕಂತಾಗುತ್ತದೆ ಎನ್ನುವುದು ಮಾತ್ರ ನಿಜ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ: ಇಸ್ರೇಲ್ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ