ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ (Udupi DC) ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಜಗದೀಶ್ (G Jagadish) ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕೂರ್ಮರಾವ್ (M Kurma Rao) ಅವರನ್ನು ನೇಮಿಸಲಾಗಿದೆ. ಈಶಾನ್ಯ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ. ಕೂರ್ಮರಾವ್ರನ್ನು ಉಡುಪಿಯ ಹೊಸ ಡಿಸಿಯಾಗಿ ನೇಮಿಸಲಾಗಿದೆ. ಈ ಬಗ್ಗೆ, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸರ್ಕಾರಿ ಹುದ್ದೆಯಲ್ಲಿ ಇದ್ದರೂ ಪ್ರವೃತ್ತಿಯಾಗಿ ಕೃಷಿ ಮಾಡುವುದರಲ್ಲಿ ಮುಂದಾಗಿರುವ ವಿಚಾರ ಜಿಲ್ಲೆಯಲ್ಲಿ ವೈರಲ್ ಆಗಿತ್ತು. ಜಿಲ್ಲಾಧಿಕಾರಿ ಅವರ ಉತ್ಸಾಹ ನಿಜಕ್ಕೂ ಇತರರಿಗೆ ಮಾದರಿ ಎಂದು ವಿಚಾರವಾಗಿತ್ತು. ಅವರು ತಾನೋರ್ವ ಐಎಎಸ್ ಅಧಿಕಾರಿ ಎಂದು ಹಮ್ಮು ಬಿಮ್ಮಿಲ್ಲದೇ ತನ್ನ ಬಂಗ್ಲೆಯ ಸುತ್ತಲೂ ಸಾವಯವ ತರಕಾರಿ ಕೃಷಿ ಮಡುತ್ತಿದ್ದರು. ಒಬ್ಬ ರೈತ ಯಾವ ರೀತಿ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಾರೋ ಹಾಗೇ ಟಿ ಶರ್ಟ್ ಧರಿಸಿ, ಲುಂಗಿ ಕಟ್ಕೊಂಡು, ತರಕಾರಿ ಗಿಡದ ಮಧ್ಯೆ ಕಳೆ ಕೀಳುತ್ತಾ, ನೀರು ಹಾಯಿಸುತ್ತಾ ಇದ್ದರು.
ಕೊರೊನಾ ನಿರ್ವಹಣೆಯ ಸಂದರ್ಭದಲ್ಲಿ ತಮ್ಮ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ, ಎಚ್ಚರಿಕೆ, ಮುಂಜಾಗ್ರತಾ ಕ್ರಮಗಳನ್ನು ಹಂಚಿಕೊಳ್ಳುತ್ತಿದ್ದರು. ಯಾವುದೇ ಮುಲಾಜಿಲ್ಲದೆ ಕೊವಿಡ್-19 ನಿಯಂತ್ರಣಕ್ಕೆ ಗಡಿಭಾಗದಲ್ಲಿ ನಿರ್ಬಂಧಗಳನ್ನು ಕಠಿಣವಾಗಿ ಅಳವಡಿಸಿದ್ದರು ಎಂಬ ಹಿರಿಮೆಯೂ ಜಿ. ಜಗದೀಶ್ ಅವರದಾಗಿತ್ತು.
ಆದರೆ, ಕೊರೊನಾ ಮೊದಲನೇ ಅಲೆಯ ಬಳಿಕ ತುಂಬಿದ್ದ ಬಸ್ನಿಂದ ವಿದ್ಯಾರ್ಥಿಗಳನ್ನು ಇಳಿಸಿದ ಘಟನೆಯ ಕಾರಣಕ್ಕೆ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅವರ ಸಾಮಾಜಿಕ ಜಾಲತಾಣ ಬಳಕೆಯನ್ನು, ಘಟನೆಯನ್ನು ಸಾರ್ವಜನಿಕರು ಆಕ್ಷೇಪಿಸಿದ್ದರು. ಆರಂಭದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಜಿ. ಜಗದೀಶ್ ಕೊನೆಯ ವೇಳೆಯಲ್ಲಿ ಟೀಕೆಗೂ ಗುರಿಯಾಗಬೇಕಾಗಿ ಬಂದಿತ್ತು.
ಇದೀಗ, ಜಿಲ್ಲಾಧಿಕಾರಿ ಜಿ. ಜಗದೀಶ್ರನ್ನು ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯಾಗಿ ಎಂ. ಕೂರ್ಮರಾವ್ ನೇಮಕವಾಗಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಆಗಸ್ಟ್ 30ರಂದು ಯೆಲ್ಲೋ ಅಲರ್ಟ್; ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯು ತರಗತಿ ಆರಂಭ
ಉಡುಪಿಯಲ್ಲಿ ಕೊರೊನಾ ಇಳಿಕೆ ಆಗಿಲ್ಲ; ಸೋಮವಾರದಿಂದ ಶಾಲೆ ತೆರೆಯುವುದಿಲ್ಲ: ಸಚಿವ ಸುನಿಲ್ ಕುಮಾರ್
Published On - 8:20 pm, Sun, 29 August 21