ಬಿಜೆಪಿ-ಕಾಂಗ್ರೆಸ್​​ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ

ಉಡುಪಿ ಪರ್ಯಾಯ ಮಹೋತ್ಸವ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಪ್ರದರ್ಶಿಸಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಡಿಸಿ ನಡೆ ಸೇವಾ ನಿಯಮಗಳ ಉಲ್ಲಂಘನೆ ಎಂದು ಕಾಂಗ್ರೆಸ್ ಆಕ್ಷೇಪಿಸಿ, ಮುಖ್ಯಮಂತ್ರಿಯವರಿಗೆ ದೂರು ನೀಡಿದೆ. ಆದರೆ, ಬಿಜೆಪಿ ಇದನ್ನು ಹಿಂದೂ ಸಂಪ್ರದಾಯದ ಭಾಗವೆಂದು ಸಮರ್ಥಿಸಿಕೊಂಡು, ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿದೆ. ಈ ವಿಚಾರ ಉಡುಪಿ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ-ಕಾಂಗ್ರೆಸ್​​ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ
ಉಡುಪಿ ಡಿಸಿ ನಡೆಗೆ ಪರ-ವಿರೋಧ ಚರ್ಚೆ
Edited By:

Updated on: Jan 21, 2026 | 1:25 PM

ಉಡುಪಿ, ಜನವರಿ 21: ಶೀರೂರು ಮಠದ ಪರ್ಯಾಯ ಮಹೋತ್ಸವ ಹಿನ್ನೆಲೆ ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಜಿಲ್ಲಾಧಿಕಾರಿಗಳಿಂದ ಚಾಲನೆ ವಿಚಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಬಿಜೆಪಿ ಶಾಸಕ ಯಶಪಾಲ್ ಸುವರ್ಣ ನೀಡಿದ್ದ ಕೇಸರಿ ಧ್ವಜವನ್ನು ಪಡೆದಿದ್ದ ಡಿಸಿ ಸ್ವರೂಪ ಟಿ. ಕೆ. ಅದನ್ನು ತೋರಿಸುವ ಮೂಲಕ ಪರ್ಯಾಯ ಮೆರವಣಿಗೆ ಚಾಲನೆ ನೀಡಿದ್ದರು. ಇದೇ ವಿಚಾರಕ್ಕೀಗ ಉಡುಪಿ ಜಿಲ್ಲಾ ಕಾಂಗ್ರೆಸ್​​ ಸಮಿತಿ ಆಕ್ಷೇಪ ತೆಗೆದಿದೆ. ಮುಂದುವರಿದು ಮುಖ್ಯಮಂತ್ರಿಗಳಿಗೆ ದೂರು ನೀಡಿರೋದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಕಾಂಗ್ರೆಸ್​​ ಆರೋಪವೇನು?

ಜ. 18ರ ಮುಂಜಾನೆ ಸುಮಾರು 3 ಗಂಟೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ಪರ್ಯಾಯ ಮೆರವಣಿಗೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಪರ್ಯಾಯ ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಶಾಸಕರು RSS ಧ್ವಜವನ್ನು ಜಿಲ್ಲಾಧಿಕಾರಿಯವರ ಕೈಗೆ ಹಸ್ತಾಂತರಿಸಿದ್ದು, ಅದೇ. ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಸಾರ್ವಜನಿಕವಾಗಿ ಡಿಸಿ ಪ್ರದರ್ಶಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ​​ ಆಗ್ರಹಿಸಿದೆ.

ಇದನ್ನೂ ಓದಿ:  ಉಡುಪಿ ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ; ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ

ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

ಮೆರವಣಿಗೆ ಚಾಲನೆಗೆ ಕೇಸರಿ ಧ್ವಜ ತೋರಿಸಿದ ವಿಚಾರದ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆ ಸ್ವರೂಪ ಅವರು ಸ್ಪಷ್ಟನೆ ನೀಡಿದ್ದಾರೆ. ಪರ್ಯಾಯ ಮಹೋತ್ಸವದ ವೇಳೆ ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಮಾಡಿಲ್ಲ. ಈ ವಿಚಾರವನ್ನು ಸಾರ್ವಜನಿಕರು ಗಮನಿಸಬೇಕು ಎಂದು ವಿನಂತಿಸೋದಾಗಿ ಹೇಳಿದ್ದಾರೆ.

ಕಾಂಗ್ರೆಸ್​​ ನಡೆಗೆ ಬಿಜೆಪಿ ಕಿಡಿ


ನೂರಾರು ವರ್ಷಗಳ ಇತಿಹಾಸವಿರುವ ಉಡುಪಿ ಪರ್ಯಾಯ ಮಹೋತ್ಸವದ ವೇಳೆ ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತಾಧಿಕಾರಿಯಾಗಿ ಹಿಂದೂ ಸಂಪ್ರದಾಯದಂತೆ ಕೇಸರಿ ಧ್ವಜ ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಉಡುಪಿ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದು ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ. ತನ್ನ ಓಲೈಕೆ ರಾಜಕಾರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ಪ್ರತಿ ಆಚರಣೆಗಳಿಗೆ ಕಾಂಗ್ರೆಸ್‌ ನಿರಂತರ ಅಡ್ಡಗಾಲು ಹಾಕುತ್ತಿದೆ. ಪಾಕಿಸ್ತಾನಕ್ಕೆ ಜಯಕಾರ ಹಾಕುವವರನ್ನು ಬಗಲಲ್ಲಿಟ್ಟುಕೊಳ್ಳುವ, ಉಗ್ರ ಸಂಘಟನೆ ಹಮಾಸ್ ಸಮರ್ಥಕರನ್ನು ಹಿಂಬಾಲಕರನ್ನಾಗಿ ಹೊಂದಿರುವ ಕಾಂಗ್ರೆಸ್‌ನ ದೃಷ್ಟಿಯಲ್ಲಿ ಭಗವಾಧ್ವಜ ಹಾರಿಸುವುದು ಅಪರಾಧ. ಆದರೆ ಪಾಕಿಸ್ತಾನ ಬಾವುಟ ಹಾರಿಸಿದರೆ ಅಪರಾಧವಲ್ಲ ಎಂದು ಕಿಡಿ ಕಾರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:07 pm, Wed, 21 January 26