11 ತಿಂಗಳ ಮಗು ಮತ್ತು 11 ವರ್ಷದ ಬಾಲಕಿಗೆ ಕಂಡುಬಂದಿದ್ದ 2 ಅನ್ನನಾಳದ ಸಮಸ್ಯೆ; ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗುಣಮುಖ
11 ತಿಂಗಳ ಮಗುವಿಗೆ ಮರುಕಳಿಸುವ ಉಸಿರಾಟದ ಸೋಂಕುಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. 11 ವರ್ಷದ ಮಗುವಿಗೆ ಇತ್ತೀಚೆಗೆ ಧ್ವನಿಯ ಬದಲಾವಣೆ, ಮಲಗಿರುವ ಸ್ಥಿತಿಯಲ್ಲಿ ಉಸಿರಾಟದ ತೊಂದರೆ ಮತ್ತು ಕುತ್ತಿಗೆಯಲ್ಲಿ ಊತದಂತಹ ಲಕ್ಷಣ ಕಂಡುಬಂದಿತ್ತು.
ಉಡುಪಿ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗವು ಇಬ್ಬರು ಮಕ್ಕಳಲ್ಲಿ ಕಂಡುಬಂದಿದ್ದ ಸಂಕೀರ್ಣ ಮತ್ತು ಅಪರೂಪದ ಜೋಡಿ ಅನ್ನನಾಳದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಒಬ್ಬರಲ್ಲೇ ಎರಡು ಅನ್ನನಾಳಗಳು ಕಂಡುಬರುವುದು ಅತ್ಯಂತ ಅಪರೂಪದ ಲಕ್ಷಣ. ಅದರಲ್ಲೂ ಕೊಳವೆಯಾಕಾರದ ಭಾಗದ ಈ ಜೋಡಿ ಅನ್ನನಾಳಗಳು ತೀರ ಅಪರೂಪವಾಗಿದೆ. ಅಂಥವರಿಗೆ ಆಹಾರ ನುಂಗಲು ಕಷ್ಟವಾಗಬಹುದು, ಉಸಿರಾಟದ ತೊಂದರೆ, ಎದೆ ನೋವು, ಎಪಿಗ್ಯಾಸ್ಟ್ರಿಕ್ ಅಸ್ವಸ್ಥತೆ, ವಾಂತಿ, ಸ್ಟ್ರಿಡರ್, ಕೆಮ್ಮು, ರಕ್ತಸ್ರಾವ, ಮತ್ತು ಹೆಮೆಟಮೆಸಿಸ್ನಂತಹ ತೊಂದರೆಗಳು ಬರಬಹುದಾಗಿದೆ.
ಈ ಆರೋಗ್ಯ ಸಮಸ್ಯೆಯನ್ನು ದೇಹದೊಳಗೆ ಕಂಡುಬಂದ ಹೆಚ್ಚಿನ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಗುಣಪಡಿಸಬಹುದಾಗಿದೆ. ಮಣಿಪಾಲ ಮಕ್ಕಳ ಶಸ್ತ್ರಚಿಕಿತ್ಸೆಯ ವಿಭಾಗದಲ್ಲಿ ಇತ್ತೀಚೆಗೆ ಇಂತಹ ಜೋಡಿ ಅನ್ನನಾಳ ಇರುವ 2 ಪ್ರಕರಣಗಳು ಕಂಡುಬಂದಿದ್ದವು. 11 ತಿಂಗಳ ಮಗು ಮತ್ತು ಇನ್ನೊಂದು 11 ವರ್ಷದ ಹುಡುಗಿಗೆ ಇದೇ ತೆರನಾದ ಸಮಸ್ಯೆ ಕಂಡುಬಂದಿತ್ತು. 11 ತಿಂಗಳ ಮಗುವಿಗೆ ಮರುಕಳಿಸುವ ಉಸಿರಾಟದ ಸೋಂಕುಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. 11 ವರ್ಷದ ಮಗುವಿಗೆ ಇತ್ತೀಚೆಗೆ ಧ್ವನಿಯ ಬದಲಾವಣೆ, ಮಲಗಿರುವ ಸ್ಥಿತಿಯಲ್ಲಿ ಉಸಿರಾಟದ ತೊಂದರೆ ಮತ್ತು ಕುತ್ತಿಗೆಯಲ್ಲಿ ಊತದಂತಹ ಲಕ್ಷಣ ಕಂಡುಬಂದಿತ್ತು. ರೋಗಿಗಳನ್ನು ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿಕ್ ಮೌಲ್ಯಮಾಪನದ ಮೂಲಕ ಮೌಲ್ಯಮಾಪನ ಮಾಡಲಾಯಿತು. ಸಂಪೂರ್ಣ ಮೌಲ್ಯಮಾಪನದ ನಂತರವೂ, 11 ವರ್ಷದ ರೋಗಿಯಲ್ಲಿನ ಜೋಡಿ ಅನ್ನನಾಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜೋಡಿ ಅನ್ನನಾಳವನ್ನು ಕಂಡು ಆಶ್ಚರ್ಯವಾಯಿತು.
ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವಿಜಯಕುಮಾರ್ ಮತ್ತು ಅವರ ತಂಡದ ಡಾ.ಸಂತೋಷ್ ಪ್ರಭು, ಡಾ.ಸಂದೀಪ್ ಪಿ ಟಿ, ಡಾ.ಹರ್ಷ ಆಚಾರ್ಯ ಮತ್ತು ಡಾ.ರಂಜನಿಯವರ ತಂಡ ಕುತ್ತಿಗೆ ಮತ್ತು ಎದೆಯಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಹೆಚ್ಚುವರಿ ಅನ್ನನಾಳವನ್ನು ತೆಗೆದುಹಾಕಿದರು. ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಅರವಿಂದ ಬಿಷ್ಣೋಯಿ, ಓರ್ವ ರೋಗಿಗೆ ಇಂಟ್ರಾಆಪರೇಟಿವ್ ಆಗಿ ಸಹಾಯ ಮಾಡಿದರು. ಮಕ್ಕಳ ಅರಿವಳಿಕೆ ತಜ್ಞ ಡಾ.ಅಜಿತ್ ಅರಿವಳಿಕೆ ನೀಡಿದರು. ಶಸ್ತ್ರಚಿಕಿತ್ಸೆಯ ನಂತರ ಇಬ್ಬರೂ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ವಿಶೇಷ ವರದಿ: ಹರೀಶ್ ಉಡುಪಿ, ಟಿವಿ9 ಕನ್ನಡ
ಇದನ್ನೂ ಓದಿ:
ಉಡುಪಿ: ಅಪಘಾತವಾದರೂ ಆಂಬುಲೆನ್ಸ್ನಲ್ಲಿಯೇ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ
(Udupi Manipal Kasturba Hospital 2 esophageal problems found in an 11 month old child and an 11 month old girl cured)
Published On - 10:14 pm, Fri, 27 August 21