ಉಡುಪಿ: ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿದ್ದ ತೊಂಬಟ್ಟು ಲಕ್ಷ್ಮೀ ಶರಣಾಗತಿ
2006ರಿಂದ ಕಣ್ಮರೆಯಾಗಿದ್ದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಉಡುಪಿಯಲ್ಲಿ ಶರಣಾಗಿದ್ದಾರೆ. ಲಕ್ಷ್ಮೀ ತಮ್ಮ ಊರಿನ ಅಭಿವೃದ್ಧಿಗೆ ಸರ್ಕಾರದ ನೆರವು ಕೋರಿದ್ದಾರೆ.ಅವರ ವಿರುದ್ಧ ಅಮಾಸ್ಯೆಬೈಲು ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಸರ್ಕಾರ ಶರಣಾಗತಿ ಪ್ಯಾಕೇಜ್ ಮತ್ತು ಪುನರ್ವಸತಿಯನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಲಕ್ಷ್ಮೀಯ ಪತಿ ಸಂಜೀವ ಕೂಡ ನಕ್ಸಲ್ ಆಗಿದ್ದು, ಮುಖ್ಯವಾಹನಿಗೆ ಬಂದಿದ್ದಾರೆ.
ಉಡುಪಿ, ಫೆಬ್ರವರಿ 02: ಉಡುಪಿ (Udupi) ಜಿಲ್ಲಾಧಿಕಾರಿ ಎದುರು ಮತ್ತೋರ್ವ ನಕ್ಸಲ್ (Naxal) ಶರಣಾಗಿದ್ದಾರೆ. ರವಿವಾರ ಬೆಳಗ್ಗೆ 11ಕ್ಕೆ ನಕ್ಸಲ್ ತೊಂಬಟ್ಟು ಲಕ್ಷ್ಮೀ ಶರಣಾಗಿದ್ದಾರೆ. ತೊಂಬಟ್ಟು ಲಕ್ಷ್ಮೀ 2006ರಿಂದ ಕಣ್ಮರೆಯಾಗಿದ್ದರು. ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ಪತಿ ಸಂಜೀವ ಜೊತೆಗೆ ವಾಸವಾಗಿದ್ದರು. ಈ ವೇಳೆ ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿದ್ದರು.
ಆದರೆ, ಆಂಧ್ರಪ್ರದೇಶದಲ್ಲಿ ಲಕ್ಷ್ಮೀ ವಿರುದ್ಧ ಯಾವುದೇ ಪ್ರಕರಣ ಇರಲಿಲ್ಲ. ಕರ್ನಾಟಕದಲ್ಲಿ ಲಕ್ಷ್ಮಿ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ. ಅಮಾಸ್ಯೆಬೈಲು ಠಾಣೆಯಲ್ಲಿ 3 ಪ್ರಕರಣಗಳ ವಿಚಾರಣೆ ಬಾಕಿ ಇದೆ.
ನನ್ನ ಊರಿಗೆ ಮೂಲಭೂತ ಸೌಕರ್ಯ ಬೇಕು: ಲಕ್ಷ್ಮೀ
ಉಡುಪಿಯಲ್ಲಿ ಶರಣಾಗತಿಯಾದ ಬಳಿಕ ನಕ್ಸಲ್ ಲಕ್ಷ್ಮೀ ಮಾತನಾಡಿ, ಮುಖ್ಯಮಂತ್ರಿಗಳು ಕೊಟ್ಟ ಅವಕಾಶ ನೋಡಿ ಮುಖ್ಯವಾಹಿನಿಗೆ ಬಂದಿದ್ದೇನೆ. ನನ್ನ ಊರಿಗೆ ಏನೂ ಇಲ್ಲ, ಶಾಲೆ, ನೀರು, ಆಸ್ಪತ್ರೆ ಬೇಕು. ಯಾರ ಒತ್ತಡವಿಲ್ಲದೆ ಶರಣಾಗಿದ್ದೇನೆ ಎಂದರು.
ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಶ್ರೀಪಾಲ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಆಕೆಯ ಪತಿ ಸಲೀಂ ಶರಣಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಶರಣಾದ ನಕ್ಸಲರ ಎಲ್ಲಾ ಪ್ರಕರಣ ರದ್ದು ಮಾಡಲಾಗಿದೆ. ಹಾಗಾಗಿ ಆಕೆಯ ಪತಿ ಸಲಿಂ ಖುಲಾಸೆಗೊಂಡಿದ್ದಾರೆ. ಲಕ್ಷ್ಮಿ ಆಂಧ್ರಪ್ರದೇಶದಲ್ಲಿ ಯಾವುದೇ ಪ್ರಕರಣ ಹೊಂದಿಲ್ಲ. ಲಕ್ಷ್ಮೀ ತೊಂಬುಟ್ಟಿಗೆ ಬೇಕಾದ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಲಕ್ಷ್ಮೀ ಊರಿನ ಸಮಸ್ಯೆಗಳನ್ನು ಬಗ್ಗೆ ಗಮನಹರಿಸಲಾಗುವುದು: ಡಿಸಿ
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಶರಣಾಗತಿ ಪ್ಯಾಕೇಜ್ ನೀಡಲಾಗುತ್ತೆ. ಮೂರು ಕೆಟಗರಿಯಲ್ಲಿ ನಕ್ಸಲ್ರಿಗೆ ಶರಣಾಗತಿ ಪ್ಯಾಕೇಜ್ ಇದೆ. ನಮ್ಮ ರಾಜ್ಯದ ನಿವಾಸಿಗಳಾಗಿದ್ದರೆ ಎ ಕೆಟಗರಿ ಪ್ಯಾಕೇಜ್ ನೀಡಲಾಗುತ್ತದೆ. ಎ ಕೆಟಗರಿಗೆ ಬರುತ್ತಾರೆ ಎಂಬುದನ್ನು ಗಮನಿಸಿ ಶಿಫಾರಸು ಮಾಡಿದ್ದೇವೆ. ಪುನರ್ವಸತಿ ಹಾಗೂ ತರಬೇತಿ ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಲಕ್ಷ್ಮೀ ಹೇಳಿರುವ ಊರಿನ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಉಳಿದಿದ್ದ ಏಕೈಕ್ ನಕ್ಸಲ್ ಶರಣಾಗತಿ, ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
ಲಕ್ಷ್ಮೀ ವಿರುದ್ಧ 3 ಪ್ರಕರಣಗಳಿವೆ: ಎಸ್ಪಿ
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಮಾತನಾಡಿ, ಅಮಾಸೆಬೈಲು ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ. 2007ರಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣ, ಹಲ್ಲೆ ಮಾಡಿ, ಬೆದರಿಕೆ ಹಾಕಿದ ಪ್ರಕರಣ ಮತ್ತು ಕರಪತ್ರಗಳನ್ನು ಅಂಟಿಸಿದ ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣ ಲಕ್ಷ್ಮೀ ವಿರುದ್ಧ ದಾಖಲಾಗಿವೆ ಎಂದು ತಿಳಿಸಿದರು.
ಶರಣಾಗತ ನಕ್ಸಲ್ ಲಕ್ಷ್ಮಿ ತೊಂಬಟ್ಟು ಪತಿ ಸಂಜೀವ ಮಾತನಾಡಿ, ಲಕ್ಷ್ಮಿ ವಿರುದ್ಧ 3 ಕೇಸುಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶರಣಾಗತಿಗೆ ಕರೆಕೊಟ್ಟರು. ಪ್ರಕರಣಗಳು ಕ್ಲೋಸ್ ಆಗುತ್ತವೆ ಅಂತ ಲಕ್ಷ್ಮಿ ಶರಣಾಗಿದ್ದಾಳೆ. ನಾನು 2009ರಲ್ಲಿ ರಾಜಶೇಖರ ರೆಡ್ಡಿ ಸಿಎಂ ಆಗಿದ್ದಾಗ ಮುಖ್ಯ ವಾಹಿನಿಗೆ ಬಂದಿದ್ದೇನೆ. ಕರ್ನಾಟಕದಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ನಾನು ಮೂಲತಃ ಪಾವಗಡ ತಾಲೂಕಿನವನು. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದು ನೆಲಸುತ್ತೇನೆ ಎಂದರು.
2008ರಲ್ಲಿ ಲಕ್ಷ್ಮಿಯನ್ನು ಮದುವೆಯಾದೆ
2008ರಲ್ಲಿ ನಾನು ಲಕ್ಷ್ಮಿಯನ್ನು ಮದುವೆಯಾದೆ. ನಕ್ಸಲ್ ಆಗಿದ್ದರೆ ಏನು ಪ್ರಯೋಜನ ಇಲ್ಲ ಅಂತ ತಿಳಿದು ಹೊರಬಂದೆ. ನಕ್ಸಲ್ ಆಗಿದ್ದು ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅರಿವಾಯಿತು. 2004 ರಿಂದ 2009ರ ತನಕ ನಾನು ನಕ್ಸಲ್ ಚಳುವಳಿಯಲ್ಲಿ ಭಾಗವಹಿಸಿದ್ದೆ. ಆದರೆ, ಈ ಕಾಲದಲ್ಲಿ ಅಂತಹ ಚಳುವಳಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಚಳುವಳಿಗಳನ್ನು ಮಾಡಿ ಆದರೆ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೂಲಕ ಚಳುವಳಿ ಮಾಡಿ. ಸಂವಿಧಾನ ಪ್ರಕಾರ ಏನು ಬೇಕಾದರೂ ಫೈಟ್ ಮಾಡಬಹುದು. ಶಸ್ತ್ರ ಇಟ್ಟುಕೊಂಡು ಕಾಡಿಗೆ ಹೋಗಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಹೊರಗೆ ಬಂದು ಯಾವ ರೀತಿಯಲ್ಲಿ ಬೇಕಾದರೂ ಫೈಟ್ ಮಾಡಬಹುದು ಎಂದು ಹೇಳಿದರು.