
ಉಡುಪಿ, ಸೆ.29: ಸ್ನೇಹಿತರೊಂದಿಗೆ ನದಿಯ ಸೌಂದರ್ಯ ಸವಿಯಲು ಹಾಗೂ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನ ಆಳ ತಿಳಿಯದೆ ನದಿಗೆ ಇಳಿದು ನೀರುಪಾಲಾಗಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ನಡೆದಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಮೃತಪಟ್ಟ ದುರದೃಷ್ಟಕರ ಯುವಕರು.
ಹಿರ್ಗಾನದ ಐವರು ಸ್ನೇಹಿತರ ತಂಡವು ಮಂಗಿಲಾರು ಮಾರ್ಗವಾಗಿ ಸುವರ್ಣ ನದಿಯ ತೀರಕ್ಕೆ ತೆರಳಲು ಯೋಜಿಸಿತ್ತು. ವಾಹನ ಸಂಚಾರವಿಲ್ಲದ ಕಾರಣ ಸುಮಾರು 2 ಕಿಲೋಮೀಟರ್‌ಗೂ ಅಧಿಕ ಕಾಲ ಅರಣ್ಯ ಹಾಗೂ ದುರ್ಗಮ ಕಾಲುದಾರಿಯಲ್ಲೇ ನಡೆದುಕೊಂಡು ಹೋಗಿ ನದಿ ತೀರ ತಲುಪಿದ್ದರು. ನದಿ ತೀರ ತಲುಪಿದ ಬಳಿಕ ಭರತ್ ಹಾಗೂ ಹರ್ಷನ್ ಇಬ್ಬರೂ ನೀರಿನ ಸೆಳೆತ ಹಾಗೂ ಆಳದ ಅರಿವಿಲ್ಲದೆ ನದಿಗೆ ಇಳಿದಿದ್ದಾರೆ. ಈ ವೇಳೆ ಕ್ಷಣಾರ್ಧದಲ್ಲೇ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ದಡದಲ್ಲಿದ್ದ ಸಹಚರರು ರಕ್ಷಣೆಗೆ ಯತ್ನಿಸಿದರೂ ಫಲಕಾರಿಯಾಗಲಿಲ್ಲ.
3 ಗಂಟೆಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆ:
ಘಟನೆ ನಡೆದ ಸ್ಥಳಕ್ಕೆ ಯಾವುದೇ ರೀತಿಯ ವಾಹನ ಸಂಚಾರಕ್ಕೆ ಸುಸಜ್ಜಿತ ರಸ್ತೆ ಇರಲಿಲ್ಲ. ಹೀಗಾಗಿ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸುಮಾರು 3 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಉಪಕರಣಗಳನ್ನು ಹೊತ್ತುಕೊಂಡು ಘಟನಾ ಸ್ಥಳ ತಲುಪಬೇಕಾಯಿತು.
ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಕಾರದೊಂದಿಗೆ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸಿ, ಕೊನೆಗೂ ಭರತ್ ಪೂಜಾರಿ ಮತ್ತು ಹರ್ಷನ್ ಆಚಾರ್ಯ ಅವರ ಮೃತದೇಹಗಳನ್ನು ನದಿಯಿಂದ ಮೇಲಕ್ಕೆತ್ತಲಾಯಿತು. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರ ಅಕಾಲಿಕ ಮರಣದಿಂದ ಹಿರ್ಗಾನ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Tue, 29 September 26