ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ ಶವವಾಗಿ ಪತ್ತೆ: ಬರೋಬ್ಬರಿ 11 ದಿನಗಳ ಬಳಿಕ ಕೆರೆಯಲ್ಲಿ ಕಂಡುಬಂತು ಮೃತದೇಹ
ಹಾಸನದಲ್ಲಿ 11 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ ತುಮಕೂರು ಜಿಲ್ಲೆಯ ತುರುವೇಕೆರೆಯ ಕೋಲಾಳ ಕೆರೆಯಲ್ಲಿ ಪತ್ತೆಯಾಗಿದೆ. ಸೆ.19ರ ರಾತ್ರಿ ಪತಿ ಜೊತೆಗಿದ್ದ ಪ್ರಿಯಾಂಕಾ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು. ಅಂದಿನಿಂದಲೂ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು.

ಹಾಸನ, ಸೆಪ್ಟೆಂಬರ್ 29: ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ ಮೃತದೇಹ ಬರೋಬ್ಬರಿ ಹನ್ನೊಂದು ದಿನಗಳ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಸೆ.19ರ ರಾತ್ರಿ ಪತಿ ಜೊತೆಗಿದ್ದ ಪ್ರಿಯಾಂಕಾ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು. ಅಂದಿನಿಂದಲೂ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಕಾಲುವೆ ನೀರು ನಿಲ್ಲಿಸಿ ಸುರಂಗ, ಕೆರೆ ಎಲ್ಲೆಡೆ ಸಂಬಂಧಿಕರು ಶೋಧ ನಡೆಸಿದ್ದರು. ನಾಲೆಯಿಂದ ನೀರು ಹರಿದು ತುಂಬುವ ಎಲ್ಲಾ ಕೆರೆಗಳಲ್ಲಿಯೂ ಶೋಧ ನಡೆದಿತ್ತು. ತುರುವೇಕೆರೆ, ತಿಪಟೂರು ಭಾಗದಲ್ಲಿ ಡ್ರೋನ್ ಮೂಲಕ ಪೊಲೀಸರು ಪ್ರಿಯಾಂಕಾಗಾಗಿ ಹುಡುಕಾಡಿದ್ದರು. ಈ ನಡುವೆ ಕೊನೆಗೂ ಕೋಲಾಳ ಕೆರೆಯಲ್ಲಿ ಶವವಾಗಿ ಪ್ರಿಯಾಂಕಾ ಪತ್ತೆಯಾಗಿದ್ದಾರೆ.
ಕೇಳಿಬಂದಿತ್ತು ಆರೋಪ-ಪ್ರತ್ಯಾರೋಪ
ಬಾಗೂರು ಗ್ರಾಮದ ಕೃಷ್ಣಸ್ವಾಮಿ-ಶೋಭ ದಂಪತಿ ಪುತ್ರಿಯಾಗಿದ್ದ ಈಕೆಯನ್ನು ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ ಜೊತೆ ವಿವಾಹಮಾಡಿ ಕೊಡಲಾಗಿತ್ತು. ಕೆಎಎಸ್ ಪರೀಕ್ಷೆಗಾಗಿ ಪ್ರಿಯಾಂಕಾ ಸಿದ್ಧತೆ ಕೂಡ ನಡೆಸುತ್ತಿದ್ದರು. ಪತ್ನಿ ಎರಡೂವರೆ ತಿಂಗಳ ಗರ್ಭಿಣಿ ಆಗಿದ್ದರೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ರಾಜಿ ಸಂಧಾನವೂ ನಡೆದಿತ್ತು. ಈ ನಡುವೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ರಾಜಶೇಖರನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದರು.
ಮತ್ತೊಂದೆಡೆ ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧವೇ ರಾಜಶೇಖರ ಮತ್ತು ಕುಟುಂಬಸ್ಥರು ದೂರಿದ್ದರು. ಆಕೆಗೆ ಈಗಾಗಲೇ ಮೊದಲೇ ಒಂದು ಮದುವೆಯಾಗಿತ್ತು ಎಂಬ ಕಹಿ ಸತ್ಯವನ್ನು ಮುಚ್ಚಿಟ್ಟು ಮದುವೆ ಮಾಡಿಕೊಡಲಾಗಿದೆ. ರಾಜಶೇಖರ ಜೊತೆ ಮದುವೆಯಾಗುತ್ತಿದ್ದ ದಿನವೇ ಆಕೆಯ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೇ ಬಂದಿದ್ದ. ಮಗಳು ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಆತುರದಲ್ಲಿ ಆಕೆಯ ಪೋಷಕರು ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದಾರೆ. ಮಗಳು ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂದು ಆರೋಪಿಸಿದ್ದರು. ಪ್ರಿಯಾಂಕಾಗೆ ಈಜು ಬರುತ್ತಿದ್ದ ಕಾರಣ ಆಕೆಯ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ಈಗ ಶವವಾಗಿ ಪ್ರಿಯಾಂಕಾ ಪತ್ತೆಯಾಗಿದ್ದು, ಅಸಲಿಗೆ ನಡೆದಿದ್ದೇನು ಎಂಬುದು ಪೊಲೀಸರ ತನಿಖೆ ಬಳಿಕವೇ ಗೊತ್ತಾಗಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:28 pm, Tue, 29 September 26




