ರಸ್ತೆ ಬದಿ ಕಸವನ್ನೂ ಎಸೆಯುತಾರೆ, ನಾಯಿ ಮರಿಗಳನ್ನೂ ಗೋಣಿ ಚೀಲದಲ್ಲಿ ತುಂಬಿಸಿ ಎಸೆದು ಹೋಗ್ತಾರೆ ಕಟಪಾಡಿಯಲ್ಲಿ!
Katapadi Village Panchayat: ಇಷ್ಟೆಲ್ಲಾ ದಾರುಣ ಘಟಿಸುತ್ತಿದ್ದರೂ ಸ್ಥಳೀಯ ಕಟಪಾಡಿ ಪಂಚಾಯತ್ ಭದ್ರವಾಗಿ ಹೊದಿಕೆ ಹೊದ್ದು ಮಲಗಿದೆ. ರಾಜ್ಯ ಹೆದ್ದಾರಿ ಎಂಬುವುದು ತ್ಯಾಜ್ಯ ಸಂಗ್ರಹಣಾ ಘಟಕವಾಗಿ ಮಾರ್ಪಟ್ಟಿದೆ.

ಉಡುಪಿ: ರಸ್ತೆ ಬದಿಯಲ್ಲಿ ಕಸ (Garbage) ಎಸೆಯೋದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಆದ್ರೆ ಇಲ್ಲಿಯ ಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬದುಕಿರೋ ನಾಯಿ ಮರಿಗಳನ್ನೇ (Dogs) ಗೋಣಿ ಚೀಲದಲ್ಲಿ ತುಂಬಿಸಿ ಎಸೆದು ಹೋಗ್ತಾರೆ. ಇಂತಹ ಅಮಾನವೀಯ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ (Katapadi in Udupi).
ಅದು ಕಟಪಾಡಿ ಶಿರ್ವ ರಾಜ್ಯ ಹೆದ್ದಾರಿಯ ನಾನ್ ಸ್ಟಾಪ್ ಬಸ್ ನಿಲ್ದಾಣ. ರೈಲ್ವೆ ಮೇಲ್ಸೇತುವೆ ದಾಟಿದ ಮೇಲೆ ಈ ಪ್ರದೇಶ ಬರುತ್ತೆ. ಇಷ್ಟು ದಿನ ರೈಲ್ವೇ ಬ್ರಿಡ್ಜ್ ಮೇಲಿಂದ ರಸ್ತೆ ಬದಿ ಕಸ ಎಸೆದು ಹೋಗ್ತಾ ಇದ್ರು. ಆದರೆ ಇದೀಗ ಬದುಕಿರೋ ನಾಯಿ ಮರಿಗಳನ್ನ ಗೋಣಿ ಚೀಲದಲ್ಲಿ ತುಂಬಿಸಿ ಎಸೆದು ಹೋಗ್ತಾ ಇದ್ದಾರೆ. ದಾರುಣದ ಸಂಗತಿಯೆಂದರೆ ಕೆಲವು ಮರಿಗಳು ಸತ್ತು ನಾರುತ್ತಿವೆ. ಕೆಲವು ಗೋಣಿ ಚೀಲದಿಂದ ಹೊರ ಬಂದು ತಿರುಗಾಡುತ್ತಿವೆ. ಇನ್ನೂ ಕೆಲವು ಗೋಣಿಯ ಒಳಗಿದ್ದು ಹಸಿವಿನಿಂದ ನರಳುತ್ತಿದೆ.
ಇಷ್ಟೆಲ್ಲಾ ದಾರುಣ ಘಟಿಸುತ್ತಿದ್ದರೂ ಸ್ಥಳೀಯ ಕಟಪಾಡಿ ಪಂಚಾಯತ್ ಭದ್ರವಾಗಿ ಹೊದಿಕೆ ಹೊದ್ದು ಮಲಗಿದೆ. ರಾಜ್ಯ ಹೆದ್ದಾರಿ ಎಂಬುವುದು ತ್ಯಾಜ್ಯ ಸಂಗ್ರಹಣಾ ಘಟಕವಾಗಿ ಮಾರ್ಪಟ್ಟಿದೆ. ಪಂಚಾಯತ್ ಆಡಳಿತ ಮಾತ್ರ ಆಶ್ವಾಸನೆಗಳ ದೊಡ್ಡ ಪಟ್ಟಿ ಸಿದ್ಧಪಡಿಸುತ್ತಿದೆ. ಸಿಸಿ ಕ್ಯಾಮರಾ ದಿನಂಪ್ರತಿ ಸ್ವಚ್ಛತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮಾತನ್ನಾಡುತ್ತಿದೆ. ಸ್ವಚ್ಛತೆಗಾಗಿ ಇನ್ನೂ ಹಲವು ಯೋಜನೆಗಳು ಅನುದಾನಗಳು ಇವೆ ಎನ್ನಲಾಗಿದೆ.
ಸ್ವಚ್ಛ ಭಾರತ್ ಯೋಜನೆಯಡಿ ಪ್ರತಿ ಪಂಚಾಯತ್ ಗೂ ಅನುದಾನವಿದೆ. ನಾವು ಕಸ ಹಾಕುವುದರ ಜೊತೆಗೆ ನಾವೇ ಕಸವಾಗುತ್ತಿದ್ದೇವೆ. ಇನ್ನು ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಹುಲ್ಲು ಗಾಳಿಗೆ ರಸ್ತೆಗೆ ಬಾಗಿ ನಿಲ್ಲುತ್ತಿದೆ. ಇದು ವಾಹನ ಸಂಚಾರಕ್ಕೆ ಒಂದಷ್ಟು ತೊಂದರೆಗಳನ್ನು ಕೊಡುವುದರ ಜೊತೆಗೆ ಎದುರಿನ ವಾಹನ ಬಂದಾಗ ಬದಿಗೆ ಸರಿಯಲೂ ಕಷ್ಟವಾಗುತ್ತಿದೆ. ಉಚ್ಚಿಲ ಪರಿಸರದಲ್ಲೂ ಇದೇ ರೀತಿ ರಸ್ತೆ ಬದಿಯೇ ತ್ಯಾಜ್ಯದ ಡಂಪಿಂಗ್ ಯಾರ್ಡ್ ಆಗಿದೆ. ಇನ್ನಾದರೂ ಸ್ಥಳೀಯ ಪಂಚಾಯತ್ ಎಚ್ಚೆತ್ತು ಕೊಳ್ಳುತ್ತದಾ?
Also Read: ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್
Also Read: 55 ವರ್ಷಗಳ ನಂತರ ಗೂಗಲ್ ನೆರವಿನಿಂದ ಮಲೇಷ್ಯಾದಲ್ಲಿ ಅಪ್ಪನ ಸಮಾಧಿ ಪತ್ತೆ ಹಚ್ಚಿದ ತಮಿಳುನಾಡಿನ ವ್ಯಕ್ತಿ




