ಉಡುಪಿ: ಕೊಚ್ಚಿನ್ ಶಿಪ್ ಯಾರ್ಡ್ನಿಂದ ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಉತ್ತರ ಪ್ರದೇಶದ ಇಬ್ಬರ ಬಂಧನ
ಉಡುಪಿಯ ಮಲ್ಪೆಯಲ್ಲಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಮತ್ತು ಸಂತ್ರಿ, ಒಂದೂವರೆ ವರ್ಷಗಳಿಂದ ಪಾಕಿಸ್ತಾನಕ್ಕೆ ರಹಸ್ಯ ತಾಂತ್ರಿಕ ಮಾಹಿತಿ ರವಾನಿಸುತ್ತಿದ್ದರು. ಈ ಘಟನೆ ದೇಶ ಭದ್ರತೆ ದೃಷ್ಟಿಯಿಂದ ಗಂಭೀರ ಕಳವಳಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಡುಪಿ, ನವೆಂಬರ್ 21: ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಉಡುಪಿ (Udupi) ಜಿಲ್ಲೆಯ ಮಲ್ಪೆಯಲ್ಲಿ ಬಂಧಿಸಲಾಗಿದೆ. ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಉತ್ತರ ಪ್ರದೇಶ (Uttar Pradesh) ಮೂಲದ ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದೆ. ಇವರು ಕಿಸ್ತಾನಕ್ಕೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಬ್ಬರೂ ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕೊಚ್ಚಿನ್ ಶಿಪ್ ಯಾರ್ಡ್ ಭಾರತೀಯ ನೌಕಾಪಡೆಗೆ ಟಗ್‌ಗಳನ್ನು ನಿರ್ಮಿಸಿ ಕೊಡುವ ಸಂಸ್ಥೆಯಾಗಿದ್ದು, ಖಾಸಗಿ ಸಂಸ್ಥೆಗಳಿಗೂ ಹಡಗುಗಳನ್ನು ನಿರ್ಮಿಸಿಕೊಡುತ್ತಿದೆ. ಈ ಸಂಸ್ಥೆಯ ಪ್ರಧಾನ ಕಚೇರಿ ಕೇರಳದಲ್ಲಿದೆ.
ಒಂದೂವರೆ ವರ್ಷದಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರೋಪಿಗಳು
ಕಳೆದ ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗುಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿ, ರಹಸ್ಯ ತಾಂತ್ರಿಕ ಮಾಹಿತಿಗಳನ್ನು ವಾಟ್ಸ್ಆ್ಯ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎಂಬ ಗಂಭೀರ ವಿಚಾರ ಈಗ ಬಯಲಾಗಿದೆ. ಕೇರಳದಲ್ಲಿ ಕೆಲಸ ಮಾಡುವ ಸಮಯದಲ್ಲಿ ರೋಹಿತ್ ಹಲವು ಬಾರಿ ಮಾಹಿತಿ ಹಂಚಿಕೊಂಡಿದ್ದು, ಮಲ್ಪೆಗೆ ಬರುವವರೆಗೂ ಈ ಚಟುವಟಿಕೆ ಮುಂದುವರಿದಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಅನುಮಾನದ ಮೇರೆಗೆ ದೂರು ನೀಡಿದ್ದ ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ
ಈ ಕುರಿತು ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ನೀಡಿದ ದೂರಿನ ಆಧಾರದಲ್ಲಿ ಉಡುಪಿ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರ ವಿರುದ್ಧ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ, ಗೌಪ್ಯ ಮಾಹಿತಿ ಮಾರಾಟ ನಡೆಸಿದ ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮಾಹಿತಿ ಹಂಚಿಕೆ ಮಾಡಿ ಹಣ ಪಡೆಯುತ್ತಿದ್ದರೆಂಬ ಅಂಶವೂ ತನಿಖೆಯಿಂದ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಪರ ಬೇಹುಗಾರಿಕೆ: ಉಡುಪಿ ಪೊಲೀಸರು ಹೇಳಿದ್ದೇನು?
ಪ್ರಕರಣ ಸಂಬಂಧ ರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್ನ ಮಾಸ್ಟರ್ಮೈಂಡ್ ಒಬ್ಬನಲ್ಲ, ಇಬ್ಬರು!: ಪೊಲೀಸಪ್ಪನ ಜೊತೆ ಸಿಎಂಎಸ್ ಮಾಜಿ ಉದ್ಯೋಗಿಯೂ ಲಾಕ್
ಈ ಪ್ರಕರಣ ಸದ್ಯ ದೇಶದ ಭದ್ರತೆ ದೃಷ್ಟಿಯಿಂದ ಗಂಭೀರ ಆತಂಕ ಉಂಟುಮಾಡಿದೆ. ಉಡುಪಿ ಪೊಲೀಸರು ಆರೋಪಿಗಳ ಜಾಲದ ಮೂಲ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Fri, 21 November 25



