ಉಡುಪಿ: ಇಂದು (ಆಗಸ್ಟ್ 13) ವಿಶ್ವ ಅಂಗಾಂಗ ದಾನ ದಿನವಾಗಿದ್ದು (World Organ Donation Day) ಈ ಸಂದರ್ಭದಲ್ಲಿ ಉಡುಪಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraj Bommai), ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅದು ಯಶಸ್ವಿಯಾಗುತ್ತಿದೆ. ಅಂಗಾಂಗ ದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದಾದ್ದರಿಂದ ಹೆಚ್ಚಿನ ಜನ ಅಂಗಾಂಗ ದಾನಕ್ಕೆ (organ donation) ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವ ಉಳಿಸಲು ಸಾಧ್ಯವಿದೆ ಎಂದು ಕರೆ ನೀಡಿದ್ದಾರೆ.
ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಮ್ಮ ಕಿಡ್ನಿ ,ಹಾರ್ಟ್ ,ಲಿವರ್ ಇನ್ನೊಬ್ಬರ ಉಪಯೋಗಕ್ಕೆ ಬರಲಿ. ನಮ್ಮ ಮರಣಾನಂತರ ಅದು ಮತ್ತೆ ಜೀವ ನೀಡುತ್ತದೆ ಎಂದರೆ ಅದಕ್ಕಿಂತ ಉತ್ತಮ ಸಂಗತಿ ಇನ್ನೇನಿದೆ. ಹೀಗಾಗಿ ಜನರು ಅಂಗಾಂಗ ದಾನಕ್ಕೆ ಮನಸ್ಸು ಮಾಡಬೇಕು. ವಿಶ್ವ ಅಂಗಾಂಗ ದಾನ ದಿನದ ಸಂದರ್ಭದಲ್ಲಿ ನಾನು ಅಂಗಾಂಗ ದಾನಕ್ಕೆ ಸಹಿ ಹಾಕುವ ನಿರ್ಧಾರ ತೆಗೆದುಕೊಂಡಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಸತ್ಕಾರ್ಯಕ್ಕೆ ಮುಂದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ನಿಯಂತ್ರಣ: ಇಂದು ತಜ್ಞರ ತುರ್ತು ಸಭೆ
ಇದೇ ಸಂದರ್ಭದಲ್ಲಿ ಕೊರೊನಾ ನಿಯಂತ್ರಣ ವಿಚಾರವಾಗಿ ಮಾತನಾಡಿದ ಅವರು ಇಂದು ಕರಾವಳಿಯಿಂದ ಬೆಂಗಲುರಿಗೆ ತೆರಳುತ್ತಿದ್ದು, ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ. ಬೆಂಗಳೂರಿಗೆ ತೆರಳಿದ ತಕ್ಷಣ ತಜ್ಞರ ಜೊತೆ ಮಾತನಾಡುವೆ. ಅವರು ನೀಡುವ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಕೊರೊನಾ ಮತ್ತೆ ಉಲ್ಬಣಿಸುತ್ತಿರುವುದು ಕಂಡುಬಂದಿರುವುದರಿಂದ ಅದರ ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಗಡಿ ಭಾಗದ ಭೇಟಿಯನ್ನು ದಿಢೀರ್ ರದ್ದುಪಡಿಸಿದ ಸಿಎಂ ಬೊಮ್ಮಾಯಿ
ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು; ಕಷ್ಟಕ್ಕೆ ಪರಿಹಾರ ಕೇಳುವರೇ ವಿನಃ ವೈಯಕ್ತಿಕವಾಗಿ ಏನೂ ಕೇಳಲ್ಲ: ಸಿಎಂ ಬೊಮ್ಮಾಯಿ
(World Organ Donation Day 2021 Karnataka CM Basavaraj Bommai urge people to sign for organ donation)