Ugadi 2021: ದಾವಣಗೆರೆಯಲ್ಲಿ ಯುಗಾದಿ ಹಬ್ಬಕ್ಕೆ ಶಾವಿಗೆ ಬಸಿದು ಸಕ್ಕರೆ ತುಪ್ಪದೊಂದಿಗೆ ಸವಿಯುವುದೇ ವಿಶೇಷ!
ದಾವಣಗೆರೆ ಜಿಲ್ಲೆಯಲ್ಲಿ ಯುಗಾದಿ ಆಚರಣೆಯಲ್ಲಿ ಬೇವು-ಬೆಲ್ಲದ ಜೊತೆಗೆ ಶಾವಿಗೆಯೂ ಫೇಮಸ್. ದೇಶ ವಿದೇಶಗಳಲ್ಲಿಯೂ ಜಿಲ್ಲೆಯ ಶಾವಿಗೆ ಪ್ರಸಿದ್ಧತೆ ಪಡೆದಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಯುಗಾದಿ ಆಚರಣೆಯಲ್ಲಿ ಬೇವು-ಬೆಲ್ಲದ ಜೊತೆಗೆ ಶಾವಿಗೆಯೂ ಫೇಮಸ್. ದೇಶ ವಿದೇಶಗಳಲ್ಲಿಯೂ ಜಿಲ್ಲೆಯ ಶಾವಿಗೆ ಪ್ರಸಿದ್ಧತೆ ಪಡೆದಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರಲು ಶಾವಿಗೆ ತಯಾರಿಕೆಯ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.
ಯುಗಾದಿ ಬಂತೆಂದರೆ ಭಾರತೀಯ ಸಂಪ್ರದಾಯದಲ್ಲಿ ಹೊಸ ವರ್ಷದ ಆಗಮನ. ಹಬ್ಬದ ಆಚರಣೆಯಲ್ಲಂತೂ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಲ್ಲೆಲ್ಲೂ ಶಾವಿಗೆಯ ಘಮ ಹರಡಿರುತ್ತದೆ. ಜಿಲ್ಲೆಯ ಕೆಟಿಜೆ ನಗರದ 17ನೇ ಕ್ರಾಸ್ನಲ್ಲಿ ಹತ್ತಾರು ಶಾವಿಗೆ ತಯಾರಿಕಾ ಘಟಕಗಳು ಶಾವಿಗೆ ತಯಾರಿಸುವಲ್ಲಿ ನಿರತರಾಗಿರುತ್ತಾರೆ.
ವಿಶೇಷ ಅಂದರೆ ಬಹುತೇಕರ ಮನೆಯಲ್ಲಿ ಶಾವಿಗೆ ಬಸಿದು ಸಕ್ಕರೆ, ಹಾಲು, ತುಪ್ಪದೊಂದಿಗೆ ಬೇವು-ಬೆಲ್ಲ ಸ್ವೀಕರಿಸುತ್ತಾರೆ. ಹಾಗಾಗಿ ಶಾವಿಗೆ ತಯಾರಿಕಾ ಘಟಕಗಳು ರಾಶಿ ರಾಶಿ ಶಾವಿಗೆಯನ್ನು ತಯಾರಿಸಿ ಬಿಸಿಲಿಗೆ ಒಣ ಹಾಕಿರುವುದು ಕಂಡು ಬರುತ್ತಿದೆ. ದೇಶ ವಿದೇಶದಲ್ಲಿ ಜಿಲ್ಲೆಯ ಶಾವಿಗೆ ಪ್ರಸಿದ್ಧತೆ ಪಡೆದಿರುವುದರಿಂದ ವಿದೇಶದವರೆಗೂ ಶಾವಿಗೆಯನ್ನು ಕೊಂಡೊಯ್ಯುತ್ತಾರೆ.
ಶಾವಿಗೆ ತಯಾರಿಸುವ ಕುಟುಂಬಗಳು ಪರಂಪರಾಗತವಾಗಿ ವೃತ್ತಿ ಮಾಡಿಕೊಂಡು ಬಂದು ಜೀವನ ಕಂಡುಕೊಂಡಿದೆ. ವರ್ಷದ ನಾಲ್ಕೈದು ತಿಂಗಳು ಮಾತ್ರ ಶಾವಿಗೆ ತಯಾರಿಸಲಾಗುತ್ತದೆ. ಆಗ ತಯಾರಿಸಿಕೊಂಡು ಶಾವಿಗೆಯನ್ನು ವಿವಿಧ ಜಿಲ್ಲೆ, ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ರಾಗಿ, ಗೋಧಿ, ಅಕ್ಕಿ, ಚಿರೋಟಿ ರವೆಯಲ್ಲಿ ತಯಾರಿಸಿದ ಶಾವಿಗೆ ಕೆಜಿಗೆ 50 ರಿಂದ 60 ರೂಪಾಯಿ ಬೆಲೆ ಇದೆ. ಯುಗಾದಿ ಹಬ್ಬದ ವೇಳೆ 3-4 ಕ್ವಿಂಟಾಲ್ ಶಾವಿಗೆ ತಯಾರಿಸಲಾಗುತ್ತದೆ. ಉಳಿದಂತೆ ಪ್ರತಿನಿತ್ಯ ಒಂದು ಕ್ವಿಂಟಾಲ್ ಶಾವಿಗೆ ತಯಾರಿಸಲಾಗುತ್ತದೆ. ಶಾವಿಗೆ ತಯಾರಿಕೆಯನ್ನೇ ನಂಬಿಕೊಂಡು ಹತ್ತಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.
ಅದರಲ್ಲೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಶಾವಿಗೆ ವ್ಯಾಪಾರ ಕೈಹಿಡಿದಿದೆ. ಅಲ್ಲದೆ ಕೊರೊನಾ ಸಂದರ್ಭವಾದ ಹಿನ್ನೆಲೆ ಶಾವಿಗೆ ತಯಾರಕ ಹೆಣ್ಣು ಮಕ್ಕಳೇ ಮನೆ ಮನೆಗೆ ಹೋಗಿ ಶಾವಿಗೆ ಕೊಟ್ಟು ಬರುತ್ತಾರೆ. ಅಲ್ಲದೆ ಹೊಸದಾಗಿ ಮದುವೆಯಾದ ಅಳಿಯನಿಗೆ ಈ ಯುಗಾದಿ ಹಬ್ಬದಂದು ಶಾವಿಗೆ ಬಸಿದು ಉಣ ಬಡಿಸಬೇಕು ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ.
‘ಬೆಳಿಗ್ಗೆ ಬೇಗ ಎದ್ದು ಸೂರ್ಯನ ಕಿರಣಗಳು ಬೀಳುವುದರೊಳಗೆ ಶಾವಿಗೆ ಹಾಕಿರಬೇಕು. ದಾವಣಗೆರೆಯಲ್ಲಿ ಶಾವಿಗೆ ನಂಬರ್ 1 ಆಗಿದೆ. ಕೊರೊನಾ ಬಂದಿರುವದರಿಂದ ದೇಶ ವಿದೇಶಕ್ಕೆ ಕೊಂಡೊಯ್ಯವುದು ಕಷ್ಟವಾಗಿದೆ. ಇಲ್ಲದಿದ್ದರೆ ಮೊದಲೆಲ್ಲಾ ವಿದೇಶಕ್ಕೂ ಜಿಲ್ಲೆಯಲ್ಲಿ ತಯಾರಿಸುತ್ತಿದ್ದ ಶಾವಿಗೆ ಕಳುಹಿಸಿಕೊಡಲಾಗುತ್ತಿತ್ತು. ರವೆ ಶಾವಿಗೆ, ಅಕ್ಕಿ ಶಾವಿಗೆ ತಯಾರಿಸುತ್ತೇವೆ. ಹಿಟ್ಟು ತಂದು ಕೆಲವರು ಇಲ್ಲಿಂದಲೇ ಶಾವಿಗೆ ಹಾಕಿಕೊಂಡು ಹೋಗುತ್ತಾರೆ. ಯುಗಾದಿ ಹಬ್ಬದ ಸಮಯದಲ್ಲಿ ಹೆಚ್ಚು ಮಾರಾಟವಾಗುತ್ತದೆ ಎಂದು ಶಾವಿಗೆ ತಯಾರಕಿ ಸುಜಾತಾ ಅಭಿಪ್ರಾಯಪಟ್ಟಿದ್ದಾರೆ’
‘ಯುಗಾದಿ ಪ್ರಯುಕ್ತವಾಗಿ ಹೆಚ್ಚು ಶಾವಿಗೆಯನ್ನು ಜನರು ಕೊಂಡೊಯ್ಯುತ್ತಿದ್ದಾರೆ. ಹಲವರು ವ್ಯಾಪಾರ ಮಾಡುತ್ತಿದ್ದಾರೆ. ನಾವು ತಯಾರಿಸುವ ಶಾವಿಗೆ ಚೆನ್ನಾಗಿರುತ್ತದೆ ಎಂದು ಗ್ರಾಹಕರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತಮ ಗುಣಮಟ್ಟದ ಶಾವಿಗೆಯನ್ನು ನಾವು ತಯಾರಿಸುತ್ತೇವೆ. ಜನರಿಗೂ ಹೆಚ್ಚು ಇಷ್ಟವಾಗುತ್ತಿದೆ. 1975ರ ಕಾಲದಿಂದಲೂ ನಮ್ಮ ಕುಟುಂಬ ಶಾವಿಗೆಯನ್ನು ತಯಾರಿಸುತ್ತಿದ್ದೇವೆ. ದೇಶ ವಿದೇಶಗಳಿಗೆ ಶಾವಿಗೆ ರಫ್ತಾಗುತ್ತಿವೆ ಎಂದು ಶಾವಿಗೆ ತಯಾರಕ ವರದರಾಜ್ ಅಭಿಪ್ರಾಯಪಟ್ಟಿದ್ದಾರೆ’
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಆಚರಣೆ ಹೇಗೆ? ಎಣ್ಣೆ ಸ್ನಾನ ಮಾಡಿ, ಬೇವು-ಬೆಲ್ಲ ಸವಿಯುವಾಗ ಹೇಳಬೇಕಾದ ಮಂತ್ರ ಇದು
Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು