AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DRDO ವೈಮಾನಿಕ ಪರೀಕ್ಷಾ ಘಟಕಕ್ಕೆ ಕೇಂದ್ರ ಸಚಿವ ನಾರಾಯಣ ಸ್ವಾಮಿ ಭೇಟಿ, ಉತ್ಪಾದನಾ ಘಟಕ ತೆರೆಯಲು ಚಿಂತನೆ

ಜಿಲ್ಲೆಯ DRDO ವೈಮಾನಿಕ ಪರೀಕ್ಷಾ ಕೇಂದ್ರದ ಕಾರ್ಯಗಳ ಬಗ್ಗೆ ಗೌರವವಿದೆ. ಸಂಶೋಧನಾ ಕೇಂದ್ರದ ಜೊತೆಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ನೀಡಬೇಕಾದರೆ, ವೈಮಾನಿಕ ರಕ್ಷಣಾ ಕೇತ್ರಕ್ಕೆ ಸಂಬಂಧಿಸಿದ ಬೃಹತ್ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಘಟಕ ಸ್ಥಾಪನೆ ಸಾಧಕ ಬಾಧಕಗಳ ಸಂಪೂರ್ಣ ವರದಿ ತಯಾರಿಸಿ ಸರ್ಕಾರದಲ್ಲಿ ಚರ್ಚಿಸುವುದಾಗಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.

DRDO ವೈಮಾನಿಕ ಪರೀಕ್ಷಾ ಘಟಕಕ್ಕೆ ಕೇಂದ್ರ ಸಚಿವ ನಾರಾಯಣ ಸ್ವಾಮಿ ಭೇಟಿ, ಉತ್ಪಾದನಾ ಘಟಕ ತೆರೆಯಲು ಚಿಂತನೆ
DRDO ವೈಮಾನಿಕ ಪರೀಕ್ಷಾ ಘಟಕಕ್ಕೆ ಕೇಂದ್ರ ಸಚಿವ ನಾರಾಯಣ ಸ್ವಾಮಿ ಭೇಟಿ, ಉತ್ಪಾದನಾ ಘಟಕ ತೆರೆಯಲು ಚಿಂತನೆ
TV9 Web
| Updated By: ಸಾಧು ಶ್ರೀನಾಥ್​|

Updated on: Jul 04, 2022 | 10:29 PM

Share

ಚಿತ್ರದುರ್ಗ: ಜಿಲ್ಲೆಯ DRDO (ಡಿ ಆರ್ ಡಿ ಓ) ವೈಮಾನಿಕ ಪರೀಕ್ಷಾ ಕೇಂದ್ರದ ಕಾರ್ಯಗಳ ಬಗ್ಗೆ ಗೌರವವಿದೆ. ಸಂಶೋಧನಾ ಕೇಂದ್ರದ ಜೊತೆಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ನೀಡಬೇಕಾದರೆ, ವೈಮಾನಿಕ ರಕ್ಷಣಾ ಕೇತ್ರಕ್ಕೆ ಸಂಬಂಧಿಸಿದ ಬೃಹತ್ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಬೇಕು. ದೇಶದ ಯಾವ ಸ್ಥಳಗಳಲ್ಲಿ ವೈಮಾನಿಕ ಕ್ಷೇತ್ರದ ಕೈಗಾರಿಕೆಗಳಿವೆ. ಸಾಗಣಿಕೆ ವೆಚ್ಚವೇನು, ಬೆಂಗಳೂರಿನ ಹೆಚ್‍ಎಲ್ ಮೇಲಿನ ಒತ್ತಡ ಏನಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಘಟಕ ಸ್ಥಾಪನೆ ಸಾಧಕ ಬಾಧಕಗಳ ಸಂಪೂರ್ಣ ವರದಿ ತಯಾರಿಸಿ ಸರ್ಕಾರದಲ್ಲಿ ಚರ್ಚಿಸುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ಡಿ ಆರ್ ಡಿ ಓ ವೈಮಾನಿಕ ಪರೀಕ್ಷಣಾ ಕ್ಷೇತ್ರಕ್ಕೆ ಸೋಮವಾರ ಭೇಟಿ ಬಳಿಕ ಅವರು ಮಾತನಾಡಿದರು. ಮಾನವ ರಹಿತ ಯುದ್ಧ ವಿಮಾನ ಹಾರಟ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಧನೆ ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಡಿ ಆರ್ ಡಿಓ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆಗಳು. ವಿಶ್ವದಲ್ಲೇ ಈ ತಂತ್ರಜ್ಞಾನ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಿದೆ. ಹೊಸ ಮೈಲುಗಲ್ಲು ಸ್ಥಾಪನೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನಾಗರಿಕ ವಿಮಾನ ಸೌಲಭ್ಯ ಅಭಿವೃದ್ಧಿ:

ಆರ್ಥಿಕ ಬೆಳವಣಿಗೆ, ವೈಮಾನಿಕ ಸಂಚಾರ ದಟ್ಟಣೆ ಕಡಿಮೆ ಮಾಡಲು, ಮೇಕ್ ಇನ್ ಇಂಡಿಯಾ ಮುಖಾಂತರ ರಫ್ತು ಹೆಚ್ಚಿಸಲು, ಉತ್ಪಾದನಾ ಹಾಗೂ ಸಾಗಾಣಿಕೆ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ರೈಲು ಹಾಗೂ ವೈಮಾನಿಕ ಸೌಲಭ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಜನೆ ರೂಪಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಕುರಿತು, ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ.

ರಕ್ಷಣಾ ಇಲಾಖೆ ಅನುಮತಿ ಪಡೆದು ವೈಮಾನಿಕ ಪರೀಕ್ಷಣಾ ಕ್ಷೇತ್ರವನ್ನು ಬಳಸಿಕೊಂಡು ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ. ಸದ್ಯ ವೈಮಾನಿಕ ಪರೀಕ್ಷಣಾ ಕ್ಷೇತ್ರದ ವಿಮಾನ ನಿಲ್ದಾಣದ ರನ್ ವೇ 40 ಟನ್ ಸಾಮರ್ಥ್ಯದ ವಿಮಾನಗಳಿಗೆ ಸೂಕ್ತವಾಗಿದೆ. ನಾಗರಿಕ ವಿಮಾನ ಯಾನ ಆರಂಭಿಸಲು ಕನಿಷ್ಠ 60 ಟನ್ ಸಾಮರ್ಥ್ಯ ಇರಬೇಕು. ಇದನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುವ ಮಾರ್ಗವಿದೆ. ಆದರೆ ಮಾನವ ರಹಿತ ಯುದ್ದ ವಿಮಾನ ಪರೀಕ್ಷೆಗೆ ಇಡೀ ದೇಶದಲ್ಲಿ ಮೀಸಲಿರುವ ಏಕೈಕ ವೈಮಾನಿಕ ಪರೀಕ್ಷಣಾ ಕೇಂದ್ರ ಇದಾಗಿದೆ. ಆದ್ದರಿಂದ ಈ ಕುರಿತು ಮತ್ತೊಮ್ಮೆ ಚರ್ಚಿಸುವುದು ಅಗತ್ಯವಿದೆ ಎಂದರು.

1000 ಕಿ.ಮೀ, 24 ಗಂಟೆ ಹಾರಾಟ ಸಾಮಾರ್ಥ್ಯದ ಮಾನವ ರಹಿತ ಯುದ್ಧ ವಿಮಾನ:

ಜುಲೈ 01ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟಿಟ್ವರ್‌ನಲ್ಲಿ ಆಟೋನೋಮಸ್ ಫೈಯಿಂಗ್ ವಿಂಗ್ ಟೆಕ್ನಾಲಜಿ ಹೊಂದಿದ ಮಾನವ ರಹಿತ ಯುದ್ಧ ವಿಮಾನದ ಯಶಸ್ವಿ ಪ್ರಾಯೋಗಿಕ ಹಾರಾಟ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪವಿರುವ ಡಿ ಆರ್ ಡಿಓ ವೈಮಾನಿಕ ಪರೀಕ್ಷಣಾ ಕ್ಷೇತ್ರದಲ್ಲಿ ಈ ವಿಮಾನ ಹಾರಾಟದ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಈ ಯುದ್ಧ ವಿಮಾನ 1000 ಕಿ.ಮೀ ದೂರ ಕ್ರಮಿಸುವ ಹಾಗೂ ಸತತ 24 ಗಂಟೆ ಹಾರಾಟ ನಡೆಸುವ ಸಾಮಾರ್ಥ್ಯ ಹೊಂದಿದೆ.

2016ರಲ್ಲಿ ರೂ. 384 ಕೋಟಿ ವೆಚ್ಚದಲ್ಲಿ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪ ಡಿ ಆರ್ ಡಿ ಓ ವೈಮಾನಿಕ ಪರೀಕ್ಷಣಾ ಕ್ಷೇತ್ರ ನಿರ್ಮಿಸಲಾಗಿದೆ. ಇಲ್ಲಿ ಒಂದು ರೇಜ್ ಕಂಟ್ರೋಲರ್, 2 ವಿಮಾನ ಹ್ಯಾಂಗರ್ ಘಟಕಗಳಿವೆ. 10 ಮಾನವ ರಹಿತ ಯುದ್ದ ವಿಮಾನಗಳಿವೆ. ಯುದ್ದ ವಿಮಾನಗಳ ರಿಪೇರಿ ಹಾಗೂ ಆಧುನೀಕರಣ ಮಾಡಲಾಗುವುದು. ಇದುವರೆಗೆ ಒಟ್ಟು 150 ಬಾರಿ ಯುದ್ದ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ. ಟಾಟಾ ಹಾಗೂ ಎಲ್ ಆ್ಯಂಡ್ ಟಿ ಡೆಫೆನ್ಸ್ ಕಂಪನಿಗಳು ಇಲ್ಲಿ ಒಪ್ಪಂದ ಕರಾರಿನ ಮೇರೆಗೆ ದ್ರೋಣ್ ಹಾಗೂ ಯುದ್ದ ವಿಮಾನಗಳ ಸಂಶೋಧನೆ ನಡೆಸುತ್ತಿವೆ.

ಈ ಸಂದರ್ಭದಲ್ಲಿ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಹಾಗೂ ವೈಮಾನಿಕ ಪರೀಕ್ಷಾ ಕ್ಷೇತ್ರದ ವಿಜ್ಞಾನಿಗಳು ಉಪಸ್ಥಿತರಿದ್ದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರು ಪತ್ನಿ ವಿಜಯಕುಮಾರಿ, ಪುತ್ರಿಯರಾದ ಕೌಶಲ್ ಸ್ವಾಮಿ, ಶೀತಲ್ ಸ್ವಾಮಿ ಜತೆಗೆ ಡಿಆರ್ ಡಿಓಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.