ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ -ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟ
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಹಣೆಪಟ್ಟಿ ಕೊನೆಗೊಳಿಸಲು ನಮ್ಮ ಸರ್ಕಾರದ ಪ್ರಥಮಾದ್ಯತೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆರ್ಥಿಕ ಅನುದಾನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಸಹ ಈ ಭಾಗದ ಜಿಲ್ಲೆಗಳನ್ನು ಮಹತ್ವಕಾಂಕ್ಷೆ ಜಿಲ್ಲೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುತ್ತಿದೆ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವ ಬಿ.ಸಿ. ನಾಗೇಶ್
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆಯಿದ್ದು, ಇದನ್ನು ನಿವಾರಿಸಲು ಪ್ರಸ್ತುತ ನೇಮಕಾತಿ ಹಂತದಲ್ಲಿರುವ 15 ಸಾವಿರ ಶಿಕ್ಷಕರ ಪೈಕಿ ಕಲ್ಯಾಣ ಕರ್ನಾಟಕ ಭಾಗದಿಂದಲೇ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಸೋಮವಾರ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪೂರ್ಣ ಪ್ರಮಾಣದ ಸಂಖ್ಯೆಯಲ್ಲಿ ಈ ಭಾಗದ ಶಿಕ್ಷಕರು ನೇಮಕಾತಿಯಾಗದಿದ್ದಲ್ಲಿ ಮತ್ತೊಮ್ಮೆ ತರಬೇತಿ ನೀಡಿ ಬರುವ ಡಿಸೆಂಬರ್ ಒಳಗೆ ಮತ್ತೆ ಸಿ.ಇ.ಟಿ ಪರೀಕ್ಷೆ ನಡೆಸಲಾಗುವುದು. 371ಜೆ ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದರು.
ಕೋವಿಡ್ ಕಾರಣ ಕಳೆದ ಎರಡು ವರ್ಷ ಸರಿಯಾಗಿ ಶಾಲಾ ತರಗತಿ ನಡೆಯದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹೀಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕಲಿಕಾ ಚೇತರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿಕಾ ಚೇತರಿಕೆ ಕೋರ್ಸ್ ಬೋಧಿಸಿದ ನಂತರವೇ ಪಠ್ಯ ಬೋಧನೆ ಮಾಡಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಹಣೆಪಟ್ಟಿ ಕೊನೆಗೊಳಿಸಲು ನಮ್ಮ ಸರ್ಕಾರದ ಪ್ರಥಮಾದ್ಯತೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆರ್ಥಿಕ ಅನುದಾನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಸಹ ಈ ಭಾಗದ ಜಿಲ್ಲೆಗಳನ್ನು ಮಹತ್ವಕಾಂಕ್ಷೆ ಜಿಲ್ಲೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುತ್ತಿದೆ. ಈ ಭಾಗದಲ್ಲಿನ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಹಲವರ ವಿರೋಧದ ನಡುವೆಯೂ ಮೊಟ್ಟೆ ವಿತರಿಸಿದ್ದು, ಸದರಿ ಕಾರ್ಯಕ್ರಮದ ಪ್ರಗತಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದರು.
ಶಾಲಾ ಶಿಕ್ಷಕರ ಕೊರತೆ ನೀಗಿಸಲು ರಾಜ್ಯದಾದ್ಯಂತ 33 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 7,500 ರೂ. ಗಳಿಂದ 10,000 ಸಾವಿರ ರೂ. ಗಳಿಗೆ ಮತ್ತು ಪ್ರೌಢ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 8,000 ರೂ. ಗಳಿಂದ 10,500 ರೂ. ಗಳಿಗೆ ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:
ಅಮೃತ್ ಪೌಲ್ ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿಸಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ
Published On - 9:06 pm, Mon, 4 July 22