ಉತ್ತರ ಕನ್ನಡ: ಸತತ ಏರುಗತಿಯಲ್ಲಿ ಸಾಗುತ್ತಿದ್ದ ಕೊರೊನಾ ಪ್ರಕರಣಗಳಿಂದ ಕಂಗೆಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲೆಯಲ್ಲಿ ಕೊವಿಡ್ ಮೊದಲನೇಯ ಅಲೆಯಲ್ಲಿ ಹಳ್ಳಿಗಳು ಸುರಕ್ಷಿತವಾಗಿದ್ದವು. ಆದರೆ ಎರಡನೇಯ ಅಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಗ್ರಾಮೀಣ ಭಾಗಗಳಲ್ಲೇ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಹಳ್ಳಿಗಳತ್ತ ಹೆಚ್ಚಿನ ಗಮನಹರಿಸಿದ್ದ ಜಿಲ್ಲಾಡಳಿತ ಇದೀಗ ಗ್ರಾಮೀಣ ಪ್ರದೇಶಗಳನ್ನು ಕೊರೊನಾ ಮುಕ್ತವಾಗುವತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಸಹ ಒಂದಾಗಿದೆ. ಅದರಲ್ಲೂ ಬಹುತೇಕ ಗ್ರಾಮೀಣ ಪ್ರದೇಶಗಳು ದಟ್ಟಾರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿದ್ದು, ಇಂತಹ ಪ್ರದೇಶಗಳಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಂಟೈನ್ಮೆಂಟ್, ಮೈಕ್ರೋ ಕಂಟೈನ್ಮೆಂಟ್ ಝೋನ್ಗಳನ್ನ ಮಾಡುವ ಮೂಲಕ ಕೊರೊನಾ ಮೇಲೆ ಹಿಡಿತ ಸಾಧಿಸುವಲ್ಲಿ ಕೊನೆಗೂ ಜಿಲ್ಲಾಡಳಿತ ಯಶಸ್ವಿಯಾಗಿದೆ. ಅದರಂತೆ ಜಿಲ್ಲೆಯ ಆರು ಗ್ರಾಮ ಪಂಚಾಯತಿಗಳು ಇದೀಗ ಕೊರೊನಾ ಮುಕ್ತವಾಗಿವೆ.
ಕಳೆದ ಹತ್ತು ದಿನಗಳಲ್ಲಿ ಆರು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಸುಮಾರು 78 ಗ್ರಾಮ ಪಂಚಾಯತಿಗಳಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳಿರುವ ಗ್ರಾಮ ಪಂಚಾಯತಿಗಳು ಸಾಕಷ್ಟಿದ್ದು, ಹಂತ ಹಂತವಾಗಿ ಕೊವಿಡ್ ಮುಕ್ತವಾಗುತ್ತಿವೆ ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಂ ಪ್ರಿಯಾಂಗಾ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ನಿರ್ಮಿಸಿದ್ದು, ಪಂಚಾಯತ್ ವ್ಯಾಪ್ತಿಯಲ್ಲೇ ಆರೋಗ್ಯ ತಂಡವನ್ನು ನಿಯೋಜನೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವು ಕಾಲ ಕಾಲಕ್ಕೆ ಫೀವರ್ ಸರ್ವೆ ಮಾಡುವ ಮೂಲಕ ಕೊರೊನಾ ಹಬ್ಬುವಿಕೆಯ ಮೇಲೆ ನಿಗಾ ಇರಿಸಲಿದ್ದು, ಮೂರನೇಯ ಅಲೆಯ ಸಿದ್ಧತೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಿಇಓ ಎಂ ಪ್ರಿಯಾಂಗಾ ತಿಳಿಸಿದ್ದಾರೆ.
ನಾಳೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲೂ ಅನ್ಲಾಕ್ ಜಾರಿಯಾಗಲಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಜನ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೊರೊನಾ ಮುಕ್ತವಾದ ಗ್ರಾಮಗಳ ಜನರೂ ಹೆಚ್ಚಿನ ನಿಗಾವಹಿಸಿ ಕೊರೊನಾ ಮಾರ್ಗಸೂಚಿಗಳನ್ನು ಸೂಕ್ತವಾಗಿ ಪಾಲಿಸಬೇಕಿದೆ ಎಂದು ಸ್ಥಳೀಯರಾದ ತಿಮ್ಮಪ್ಪ ಹರಿಕಾಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಒಟ್ಟಾರೇ ಕೊರೊನಾದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಗ್ರಾಮಗಳು ಇದೀಗ ಕೊರೊನಾ ಮುಕ್ತವಾಗುವತ್ತ ಸಾಗುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಕೊರೊನಾ ಮುಕ್ತವಾಗಿರುವ ಗ್ರಾಮಗಳ ಜನರು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಿದಾಗ ಮಾತ್ರ ಮೂರನೇ ಅಲೆಯಿಂದ ದೂರ ಉಳಿಯಬಹುದಾಗಿದೆ ಎನ್ನುವುದನ್ನು ನೆನಪಿನ್ನಲ್ಲಿಡಬೇಕಾಗಿದೆ.
ಇದನ್ನೂ ಓದಿ:
ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್