,Monsoon 2022: ಶಿರಸಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ದಕ್ಷಿಣ ಕನ್ನಡ (Dakshina Kannada Rain), ಉಡುಪಿ (Udupi Rain), ಉತ್ತರ ಕನ್ನಡದಲ್ಲಿ (Uttara Kannada Rain) ಸಮುದ್ರದ ತೀರಕ್ಕೆ ತೆರಳದಂತೆ ಮೀನುಗಾರರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಇಂದು ವರುಣನ ಆರ್ಭಟ ಹೆಚ್ಚಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಉತ್ತರ ಕನ್ನಡದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಆತಂಕ ಎದುರಾಗಿದ್ದು, ಅನೇಕ ಹಳ್ಳಿಗಳು ಜಲಾವೃತವಾಗಿವೆ. 18 ಜಿಲ್ಲೆಗಳಿಗೆ ಇಂದು ಹಳದಿ ಅಲರ್ಟ್ (Yello Alert) ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಇಂದಿನಿಂದ ಜೂನ್ 25ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ವರುಣನ ಆರ್ಭಟ ಜೋರಾಗಿದೆ. ಇನ್ನೂ 4 ದಿನ ಉತ್ತರ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿರಸಿ, ಕಾರವಾರ, ಹೊನ್ನಾವರ, ಸಿದ್ಧಾಪುರ, ಅಂಕೋಲ, ದಾಂಡೇಲಿ, ಯಲ್ಲಾಪುರದಲ್ಲಿ ಮಳೆಯ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ. ಮಳೆಗಾಲದ ಆರಂಭದಲ್ಲೇ ಈ ರೀತಿಯ ಪ್ರವಾಹದ ವಾತಾವರಣ ನಿರ್ಮಾಣವಾಗಿರುವುದರಿಂದ ಮುಂದಿನ ಮೂರ್ನಾಲ್ಕು ತಿಂಗಳ ಮಳೆಯನ್ನು ಎದುರಿಸುವುದು ಹೇಗೆಂದು ಜನ ಈಗಲೇ ಚಿಂತಿತರಾಗಿದ್ದಾರೆ.
ಇದನ್ನೂ ಓದಿ: Karnataka Rain: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಹಳದಿ ಅಲರ್ಟ್ ಘೋಷಣೆ; ಮಲೆನಾಡಿನಲ್ಲೂ ಭಾರೀ ಮಳೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ಧಾಪುರ, ಭಟ್ಕಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಿಟ್ಟೂ ಬಿಡದೇ ಸುರಿದ ಮಳೆಯಿಂದ ಜನರು ಕಂಗೆಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 25ರವರೆಗೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ವರ್ಷದ ಪ್ರವಾಹದಿಂದ ಕಂಗಾಲಾಗಿರುವ ಉತ್ತರ ಕನ್ನಡ ಜಿಲ್ಲೆಯ ಜನರು ಇದೀಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿರುವ ಭೀತಿಯಲ್ಲಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಕರಾವಳಿಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಕಾರವಾರದಲ್ಲಿ 32.5 ಮಿಮೀ, ಅಂಕೋಲಾ 42.9 ಮಿಮೀ, ಕುಮಟಾ 35.3 ಮಿಮೀ, ಹೊನ್ನಾವರ 38.2 ಮಿಮೀ ಹಾಗೂ ಭಟ್ಕಳದಲ್ಲಿ 41.7 ಮಿಮೀ ಮಳೆ ಸುರಿದಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ.ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Assam Flood: ಭೀಕರ ಪ್ರವಾಹದಿಂದ ದ್ವೀಪವಾಗಿದೆ ಅಸ್ಸಾಂ; ಮಳೆಯ ಹೊಡೆತಕ್ಕೆ 81 ಜನ ಸಾವು
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಈಗಾಗಲೇ ಜಿಲ್ಲಾಡಳಿತ ಕರಾವಳಿಯ ಕಡಲತೀರಗಳಿಗೆ, ಜಲಪಾತಗಳಿಗೆ ಭೇಟಿ ನೀಡದಂತೆ ಸೂಚಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಬಿರುಗಾಳಿ ಸಹಿತ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 22 June 22