ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಆಟೋ ಡ್ರೈವರ್, ತೀಟೆ ತೀರಿಸಿಕೊಂಡು ಕೈಕೊಟ್ಟ
ಆತ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರೂ ಹುಡುಗಿಯರನ್ನು ಪಟಾಯಿಸುವುದರಲ್ಲಿ ನಿಸ್ಸೀಮ. ಪ್ರೀತಿ ಪ್ರೇಮ ಅಂತ ಅದಾಗಲೇ ಮೂರ್ನಾಲ್ಕು ಹುಡುಗಿಯರಿಗೆ ಕೈಕೊಟ್ಟಿದ್ದ ಆಟೋ ಡ್ರೈವರ್ ಮತ್ತೋರ್ವ ಯುವತಿಯನ್ನು 2 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಆದ್ರೆ, ಯುವತಿ ಮದುವೆ ಪ್ರಸ್ತಾಪ ಮಾಡುತ್ತಿದ್ದಂತೆಯೇ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.

ಕಾರವಾರ, (ಆಗಸ್ಟ್ 08): ಆಟೋ ಚಾಲಕನೋರ್ವ (Auto Driver) ಮದ್ವೆಯಾಗುವುದಾಗಿ (Marriage) ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಇದೀಗ ಕೈಕೊಟ್ಟಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿ ನಿವಾಸಿಯಾಗಿರುವ ಆಟೋ ಡ್ರೈವರ್ ಗಣೇಶ್ ಕೃಷ್ಣ ಗೊಂಡ ಎಂಬಾತ, ನೂಝ ನಿವಾಸಿ ಯುವತಿಯೋರ್ವಳನ್ನು ಮದುವೆಯಾಗವುದಾಗಿ ನಂಬಿಸಿ ಲವ್ ಬಲೆಗೆ ಬೀಳಿಸಿಕೊಂಡಿದ್ದಾನೆ. ಬಳಿಕ ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಿಸಿಕೊಂಡು ಇದೀಗ ಕೈಕೊಟ್ಟಿದ್ದು, ಯುವತಿ ಕಂಗಾಲಾಗಿದ್ದಾಳೆ.
ಯುವತಿ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದಾಗ ಕಥೆ ಕಟ್ಟಿದ್ದ ಆರೋಪಿ ಯುವತಿಗೆ ಗರ್ಭಪಾತ ಕೂಡಾ ಮಾಡಿಸಿದ್ದ. ಯಾವಾಗ ಈ ವಿಚಾರ ಯುವತಿಯ ಪೋಷಕರ ಮೂಲಕ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತೋ ಪೊಲೀಸರ ಮುಂದೆ ಯುವತಿಯನ್ನು ಮದುವೆಯಾಗೋ ನಾಟಕವಾಡಿದ್ದ ಆರೋಪಿ ಗಣೇಶ ಕೃಷ್ಣ ಗೊಂಡ ಕೊನೆಗೆ ಕಳೆದ ಒಂದು ವಾರದ ಹಿಂದೆ ಬೇರೊಂದು ಯುವತಿಯನ್ನು ಮದುವೆಯಾಗಿದ್ದಾನೆ. ಈ ಹಿನ್ನೆಲೆ ಪ್ರೀತಿಸಿದ ಯುವತಿ ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ: ಕಾರವಾರ: ಡಿಜಿಟಲ್ ಅರೆಸ್ಟ್ ಭೀತಿಗೆ 89.90 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಆರೋಪಿ ಆಟೋ ಚಾಲಕ ಗಣೇಶ್ ಕೃಷ್ಣ ಗೊಂಡ ಹಾಗೂ ಆತನ ಕುಟುಂಬಸ್ಥರಾದ ಕೃಷ್ಣಗೊಂಡ, ಕೃಷ್ಣಿ ಗೊಂಡ, ಹರೀಶ್ ಗೊಂಡ, ಭಾಸ್ಕರ ಗೊಂಡ, ನಾಗೇಂದ್ರ ಗೊಂಡ ಹಾಗೂ ಆರೋಪಿಗೆ ಬೆಂಬಲ ನೀಡಿದ ಭಟ್ಕಳದ ನಾಗೇಶ್, ಎಂ.ಡಿ.ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವರಿಗಾಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಈ ಹಿಂದೆಯೂ ಮೂರ್ನಾಲ್ಕು ಯುವತಿಯರ ಜತೆ ಇದೇ ರೀತಿ ಆಟವಾಡಿರುವುದಾಗಿ ತಿಳಿದುಬಂದಿದ್ದು, ಪೊಲೀಸರ ಮುಂದೆಯೂ ನವರಂಗಿ ಆಟವಾಡಿದ್ದ. ಇದೀಗ ಈ ಕಾಮುಕನಿಗೆ ಬುದ್ಧಿ ಕಲಿಸಲು ಪೊಲೀಸರು ಮುಂದಾಗಿದ್ದಾರೆ.
ನೂಝನ ಮೂಲದ ಈ ಯುವತಿ ಸದ್ಯ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಒಂದೇ ಸಮುದಾಯದವರಾಗಿದ್ದರಿಂದ ಕಳೆದ 2 ವರ್ಷಗಳ ಹಿಂದೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಅತನಂತೂ ಪ್ರೀತಿಯ ನಾಟಕ ಭರ್ಜರಿಯಾಗೇ ಪ್ರಾರಂಭಿಸಿದ್ದು, ಎಲ್ಲೆಲ್ಲೋ ತಿರುಗಾಟ ಇಡಗುಂಜಿ, ಆನೆಗುಡ್ಡೆ, ಸಿಗಂದೂರು ಮುಂತಾದ ದೇವಾಲಯಗಳಿಗೆ ಒಟ್ಟಿಗೆ ಭೇಟಿ ಕೂಡಾ ನೀಡಿದ್ದರು. ಒಂದು ದಿನ “ದೇವಾಲಯಕ್ಕೆ ಹೋಗೋಣ” ಅಂತಾ ನಗುನಗುತ್ತಾ ಕರೆದುಕೊಂಡು ಹೋಗಿದ್ದ ಆತ, ಮಾರುಕೇರಿಯ ಹೋಮ್‌ಸ್ಟೇಗೆ ಕರೆದೊಯ್ದು ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ಘಟನೆಯ ಬಳಿಕ ಗರ್ಭವತಿ ಆಗಿದ್ದ ಯುವತಿ, ಮದುವೆ ಬಗ್ಗೆ ಕೇಳಿದಾಗ ಡಬ್ಬಿ ಹೊಡೆಯಲಾರಂಭಿಸಿದ್ದ . ಕೊನೆಗೆ ಭಟ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ.
ಇಷ್ಟೆಲ್ಲಾ ಆದರೂ ಮದುವೆ ವಿಚಾರ ಬಂದಾಗ ತಾನು ಮದುವೆಯಾಗಲ್ಲ ಏನು ಬೇಕಾದ್ರೂ ಮಾಡ್ಕೋ ಅಂತಿದ್ದ. ಆತನಿಗಾಗಿ ಮನೆಯವರನ್ನು ಎದುರುಹಾಕಿಕೊಂಡಿದ್ದ ಯುವತಿ , ಆತನೇ ಬೇಕೆಂದು ಹಠ ಹಿಡಿದು ಆತ್ಮಹತ್ಯೆಗೂ ಯತ್ನಿಸಿದ್ದಳು. ಯಾವಾಗ ಕೈ ಕೊಡುತ್ತಾನೆಂಬುವುದು ಗೊತ್ತಾಗುತ್ತಿದ್ದಂತೆಯೇ ಯುವತಿಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆಗ ಪೊಲೀಸರ ಎದುರೇ ಆರೋಪಿ ಗಣೇಶ್ ಯುವತಿಯನ್ನು ಮದುವೆಯಾಗುವ ಭರವಸೆ ನೀಡಿದ್ದ. ಈ ಘಟನೆಯ ನಡೆದು ಒಂದು ವಾರದ ಆರೋಪಿ ಬೇರೊಂದು ಯುವತಿಯನ್ನು ಗುಪ್ತವಾಗಿ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿ ಬೇರೆ ಯುವತಿಯನ್ನು ಮದುವೆಯಾದ ಬಗ್ಗೆ ಯಾವಾಗ ಫೊಟೋ ಸಿಕ್ತೋ ಸಂತ್ರಸ್ತೆ ಯುವತಿ ಪೊಲೀಸ್ ಠಾಣೆ ಮೇಲೇರಿದ್ದು, ತನಗೆ ಮೋಸವಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.



