ಕಾರವಾರ: 52 ವರ್ಷ ವಯಸ್ಸಿನ ಮದುಮಗ 16ರ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ವಿವಾಹವಾಗಿದ್ದಾನೆ. ಚೋದ್ಯವೆಂದರೆ ಮದುವೆ ಆದ ಮೂರು ತಿಂಗಳ ಬಳಿಕವಷ್ಟೇ ತಿಳಿದಿದ್ದು ವಧು ಅಪ್ರಾಪ್ತೆ (Child marriage) ಎಂದು! ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ಈ ಘಟನೆ ನಡೆದಿದೆ. ವಧು-ವರ ಇಬ್ಬರೂ ಕಾರವಾರ ನಗರದ ನಿವಾಸಿಗಳು. ಅಂಗನವಾಡಿ ಕಾರ್ಯಕರ್ತರ (Anganwadi karyakartas) ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಬಂಧನದ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವರ:
ಅಂಗನವಾಡಿ ಕಾರ್ಯಕರ್ತರ ಮಾಹಿತಿ ಮೇರೆಗೆ ಕೂಡಲೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿ, 52 ವಯಸ್ಸಿನ ವರನನ್ನು ಪೋಲಿಸರು ಬಂಧಿಸಿದ್ದಾರೆ. ಈ ಮಧ್ಯೆ ವರ ಬಂಧನದ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿಯೇ ವಿವಾಹವಾಗಿತ್ತು.
ವರ ಕಾರವಾರ ಜೈಲಿಗೆ:
ಪೋಲಿಸ್ ಸಿಬ್ಬಂದಿಯ ಮಾಹಿತಿ ಪ್ರಕಾರ ಹುಡುಗಿ ದೈಹಿಕವಾಗಿ ದಷ್ಟಪುಷ್ಟವಾಗಿದ್ದು ಅಪ್ರಾಪ್ತೆ ಅಲ್ಲ ಎಂದು ವಿವಾಹ ಮಾಡಲಾಗಿತ್ತು ಅಂತಾರೆ ಹುಡುಗಿಯ ಸಂಭಂದಿಕರು. ಆದ್ರೆ ಅಪ್ರಾಪ್ತೆ ಎಂದು ತಿಳಿದ ಬಳಿಕ ಎರಡೂ ಕಡೆಯ ಸಂಬಂಧಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈಗ ಮದುವೆಗೆ ಹೋದ ಸಂಭಂದಿಕರೂ ಸೇರಿ ಒಟ್ಟು 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ ಅನೀಲ್, ಈಗ ಕಾರವಾರ ಜೈಲಿನಲ್ಲಿ ಇದ್ದರೆ, ಅಪ್ರಾಪ್ತೆ ವಧು ಸಾಂತ್ವನ ಕೇಂದ್ರದಲ್ಲಿ ಇದ್ದಾರೆ.
Published On - 4:04 pm, Sat, 10 September 22