ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವಪಕ್ಷ ಶಾಸಕ ದೇಶಪಾಂಡೆ ವ್ಯಂಗ್ಯ: ಸ್ಪಷ್ಟನೆ ಕೇಳಿದ ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರೋ ಗ್ಯಾರಂಟಿಗಳ ಬಗ್ಗೆ ಸ್ವಪಕ್ಷ ಶಾಸಕ, ಕಾಂಗ್ರೆಸ್ ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಆಡಿದ್ದ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ಬೆನ್ನಲ್ಲೇ ಶಾಸಕರಿಗೆ ಕರೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.

ಕಾರವಾರ, ಅಕ್ಟೋಬರ್ 13: ಗ್ಯಾರಂಟಿ ಯೋಜನೆ ಬಗ್ಗೆ ಲಘು ಹೇಳಿಕೆ ಹಿನ್ನೆಲೆ ಶಾಸಕ R.V.ದೇಶಪಾಂಡೆಗೆ (R.V.Deshpande) ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಸ್ಪಷ್ಟೀಕರಣ ಕೇಳಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರೋ ಗ್ಯಾರಂಟಿಗಳ ಬಗ್ಗೆ ಸ್ವಪಕ್ಷ ಶಾಸಕರ ಹೇಳಿಕೆ ಸರ್ಕಾರಕ್ಕೆ ಇರಿಸು ಮುರಿಸು ತಂದ ಕಾರಣ ದೇಶಪಾಂಡೆ ಅವರಿಗೆ ಮುಖ್ಯಮಂತ್ರಿಗಳೇ ಸ್ವತಃ ಕರೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಪ್ರಶ್ನೆಗೆ ಉತ್ತರಿಸಿರೋ ಶಾಸಕರು, ಬೆಂಗಳೂರಿಗೆ ಬಂದು ಮಾತನಾಡುವೆ ಎಂದಿದ್ದಾರೆ. ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಾಸಕ ದೇಶಪಾಂಡೆ ತೆರಳಲಿದ್ದು, ಇಂದು ರಾತ್ರಿ ಅಥವಾ ನಾಳೆ ಸಿಎಂ ಭೇಟಿಯಾಗಲಿದ್ದಾರೆ.
‘ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ’
ಗ್ಯಾರಂಟಿಗಳ ಬಗ್ಗೆ ತಮ್ಮ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ R.V.ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ನಾನು ಗ್ಯಾರಂಟಿ ವಿರುದ್ಧ ಮಾತನಾಡಿಲ್ಲ. ಬದಲಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದೇನೆ. ಅನುಭವ ಸಂಪನ್ನ ನಾಯಕರಾಗಿರೋ ಸಿದ್ದರಾಮಯ್ಯ ಬಡವರಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದು ಅವರ ಶಕ್ತಿ ಎಂದಿದ್ದೆ. ಅಲ್ಲದೆ, ನನ್ನ ಮಾತಿನ ಉದ್ದೇಶ ಗ್ಯಾರಂಟಿ ಯೋಜನೆಗಳ ವಿರುದ್ಧ ಅಲ್ಲ. ಸಿದ್ದರಾಮಯ್ಯ ಅವರ ಜನಪರ ಆಡಳಿತ ಹೊಗಳಿದ್ದೇನೆ ಹೊರೆತು ಟೀಕಿಸಿಲ್ಲ. ಗ್ಯಾರಂಟಿಯಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಆಗಿದೆ ಎಂದು ಹೇಳಿಲ್ಲ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕ ದೇಶಪಾಂಡೆ ಲೇವಡಿ, ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೋ ನನಗೂ ಗೊತ್ತಿಲ್ಲವೆಂದು ವ್ಯಂಗ್ಯ
ಶಾಸಕ ದೇಶಪಾಂಡೆ ಏನು ಹೇಳಿದ್ದರು?
ನಮ್ಮ ಕಾಂಗ್ರೆಸ್ ಸರ್ಕಾರ ತಂದಿರುವ ಯೋಜನೆಗಳು ಒಂದಾ, ಎರಡಾ? ಸರ್ಕಾರ ಬಡವರಿಗಾಗಿ ಹಲವು ಯೋಜನೆ ಜಾರಿಗೆ ತಂದಿದೆ. ಮಹಿಳೆಯರಿಗೆ 2000 ರೂ. ಕೊಟ್ಟಿದ್ದೇವೆ. ಅಲ್ಲದೆ, ಮಹಿಳೆಯರಿಗೆ ನೀಡಲಾಗಿರುವ ಉಚಿತ ಬಸ್ ಯೋಜನೆಯಿಂದ ಎಲ್ಲಿ ನೋಡಿದರೂ ಬಸ್ಸುಗಳಲ್ಲಿ ಮಹಿಳೆಯರೇ ಇರುತ್ತಾರೆ. ಸರ್ಕಾರಿ ಬಸ್ಗಳಲ್ಲಿನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ. ಬಸ್ನಲ್ಲಿ ಹೋದರೂ ಮಹಿಳೆಯರೇ, ದೇಗುಲಕ್ಕೆ ಹೋದರೂ ಮಹಿಳೆಯರೇ. ಸರ್ಕಾರಿ ಬಸ್ಸುಗಳಲ್ಲಿ ಯಾರಾದರೂ 4 ಜನ ಗಂಡಸರು ಹೋಗುವುದೇ ಕಷ್ಟ ಆಗಿದೆ. ನಾನು ಸಿಎಂ ಆಗಿದ್ದರೆ ಇವುಗಳನ್ನೆಲ್ಲ ಮಾಡುತ್ತಿರಲಿಲ್ಲ. ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗಳನ್ನ ಸಿಎಂ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ 10 ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ತೊಗರಿ ಸೇರಿದಂತೆ ಬೇರೆ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ. ಅವನ್ನು ತಗೊಂಡೋಗಿ ಮಾರಾಟ ಮಾಡ್ರೀ ಎಂದು ಆರ್.ವಿ. ದೇಶಪಾಂಡೆ ಹೇಳಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



