ಹೋಳಿ ಸಂಭ್ರಮಕ್ಕೆ ಕೊರೊನಾ ಅಡ್ಡಿ.. ಮನೆ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ
ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸುವ ಹಬ್ಬದಲ್ಲಿ ಹೋಳಿ ಸುಗ್ಗಿ ಕುಣಿತವೂ ಒಂದು. ಹೋಳಿ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸದ್ದು ಸಡಗರದ ಸಂಭ್ರಮ ಕಾಣುತ್ತದೆ. ಆದರೆ ಕೊರೊನಾ ಸಂಭ್ರಮದ ಆಚರಣೆಗೆ ಬ್ರೇಕ್ ಹಾಕಿರೋದು ಕೊಂಚ ನಿರಾಸೆ ಮೂಡಿಸಿದೆ.
ಕಾರವಾರ: ಹೋಳಿ ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಜಿಲ್ಲೆಯ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಅನೇಕ ಸಮಾಜದವ್ರು ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತವನ್ನ ಹೋಳಿ ಹಬ್ಬದ ಹಿನ್ನೆಲೆ ಪ್ರಾರಂಭಿಸುತ್ತಾರೆ. ಹಬ್ಬಕ್ಕೂ 7-8 ದಿನಕ್ಕೂ ಮುನ್ನ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನ ಪ್ರದರ್ಶಿಸುತ್ತಾರೆ.
ಈ ಬಾರಿ ಸಹ ಕಾರವಾರ ತಾಲೂಕಿನ ಕೋಮಾರಪಂಥ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ಸಿಕ್ಕಿದ್ರೂ ಕೂಡ ಕೊರೊನಾ ಕಾರಣ ಸಂಭ್ರಮಕ್ಕೆ ಕಡಿವಾಣ ಬಿದ್ದಿದೆ. ತಾಲೂಕಿನ ಬಿಣಗಾದ ಕರಿ ದೇವರಿಗೆ ಪೂಜೆಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಿದ್ದಾರೆ. ತಮ್ಮ ಜನಾಂಗದವರು ನೆಲೆಸಿರುವ ಮನೆ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುವುದರ ಜೊತೆಗೆ ರೋಗಗಳು ಬರದಂತೆ ತಡೆಯುತ್ತದೆ ಅನ್ನೋದು ಕೋಮಾರಪಂಥ ಸಮಾಜದ ನಂಬಿಕೆ. ಆದರೆ ಈ ಬಾರಿ ಕೊರೊನಾ ಆತಂಕ ಇರುವ ಹಿನ್ನೆಲೆ ಸುಗ್ಗಿಯನ್ನ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ ಪೇಟವನ್ನ ಕಟ್ಟಿ, ಪೊಗಡೆ ವೇಷಭೂಷಣ ಧರಿಸಿದ ಸುಗ್ಗಿ ಕುಣಿತ ಎಲ್ಲರ ಮನ ಸೆಳೆಯುತ್ತದೆ. ಜೊತೆಗೆ ಗುಮಟೆ, ಜಾಗಟೆ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧ ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ದಿನದವರೆಗೂ ವಾಪಾಸ್ ಮನೆಗೆ ತೆರಳುವಂತಿಲ್ಲ. ಈ ಬಾರಿ ಕೊರೊನಾ ಆತಂಕದಿಂದಾಗಿ ಸುಗ್ಗಿ ಕುಣಿತ ಅಕ್ಕಪಕ್ಕದ ಗ್ರಾಮಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು ಸಮಾಜದ ಮನೆಯವರ ಅನುಮತಿ ಪಡೆದುಕೊಂಡೇ ಅವರ ಮನೆಯ ಬಳಿಗೆ ತೆರಳಿ ಸುಗ್ಗಿ ಕುಣಿತ ಮಾಡುತ್ತಿದ್ದೇವೆ ಅಂತಾರೇ ಸುಗ್ಗಿ ತಂಡದ ಪ್ರಮುಖರು.
ಒಟ್ನಲ್ಲಿ ಜಾನಪದ ಕಲೆ ವಿನಾಶದ ಅಂಚಿನಲ್ಲಿರುವ ಈ ದಿನಗಳಲ್ಲಿ ಸಾಂಪ್ರದಾಯಿಕ ಸುಗ್ಗಿ ಕುಣಿತದ ಕಲೆಯನ್ನ ಉಳಿಸಿಕೊಂಡು ಬರಲಾಗುತ್ತಿದ್ದರೂ, ಕೊರೊನಾ ಕಾರಣಕ್ಕೆ ಈ ಬಾರಿ ಸಂಭ್ರಮದ ಆಚರಣೆಗೆ ಅಡ್ಡಿಯಾಗಿದೆ. ಆದರೆ ಇಷ್ಟೆಲ್ಲಾ ಅಡೆತಡೆಗಳ ನಡುವೆ ಸಂಪ್ರದಾಯಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ ಅನ್ನೋದು ಸಮಾಧಾನಕರ ಸಂಗತಿ.
ಇದನ್ನೂ ಓದಿ: ಮಾರಿಕಾಂಬೆಯನ್ನು ಶಿರಸಿಗೆ ಪರಿಚಯಿಸಿ, ಬಲಿಯಾದ ಬೇಡನ ಕಥೆಯೇ ಈ ಬೇಡರ ವೇಷ: ಜೀವನದ ಹಂಗು ತೊರೆದು ಬಡವರಿಗೆ ಸಹಾಯ ಮಾಡಿ