AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರದಿಂದ ತೈಲ ಬೆಲೆ ಏರಿಕೆ; ಪೆಟ್ರೋಲ್ ಹಾಕಿಸಿಕೊಳ್ಳಲು ಗೋವಾಗೆ ತೆರಳುತ್ತಿರುವ ಗಡಿ ಜಿಲ್ಲೆಯ ಜನ

ಬೆಲೆ ಏರಿಕೆಯ ನಡುವೆ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಾದ ಹಿನ್ನೆಲೆ, ಮಧ್ಯಮ ವರ್ಗದ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ಗೋವಾ ಮತ್ತು ಕರ್ನಾಟಕ ತೈಲ ಬೆಲೆ ನಡುವಿನ ಅಂತರ 9 ರೂಪಾಯಿ ಇದ್ದ ಹಿನ್ನಲೆ, ಗಡಿ ಜಿಲ್ಲೆಯ ಜನರು ಪೆಟ್ರೋಲ್ ಹಾಕಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಗೆ ಹೋಗುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ರಾಜ್ಯ ಸರ್ಕಾರದಿಂದ ತೈಲ ಬೆಲೆ ಏರಿಕೆ; ಪೆಟ್ರೋಲ್ ಹಾಕಿಸಿಕೊಳ್ಳಲು ಗೋವಾಗೆ ತೆರಳುತ್ತಿರುವ ಗಡಿ ಜಿಲ್ಲೆಯ ಜನ
ಪೆಟ್ರೋಲ್ ಹಾಕಿಸಿಕೊಳ್ಳಲು ಗೋವಾಗೆ ತೆರಳುತ್ತಿರುವ ಗಡಿ ಜಿಲ್ಲೆಯ ಜನ
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 20, 2024 | 10:12 PM

Share

ಉತ್ತರ ಕನ್ನಡ, ಜೂ.20: ರಾಜ್ಯ ಸರ್ಕಾರ(State government) ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳದಿಂದ ಪೆಟ್ರೋಲ್ ನೂರರ ಗಡಿ ದಾಟಿದೆ. ಇನ್ನು ಡಿಸೇಲ್ ಕೂಡ ಗೋವಾ ರಾಜ್ಯಕ್ಕಿಂತ ಹೆಚ್ಚಾಗಿದ್ದು, ವಾಹನ ಸವಾರರ ಜೇಬು ಬಿಸಿ ಮಾಡುತ್ತಿದೆ. ಆದ್ರೆ, ಗೋವಾ ಗಡಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ(Karwar)ದಲ್ಲಿ ಸಸ್ತಾ ಗೋವಾ ಮದ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪೆಟ್ರೋಲ್​ಗೆ ಮುಗಿ ಬೀಳುತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾಕ್ಕೆ ಸಮೀಪವೇ ಇದ್ದು, ಕಾರವಾರದಿಂದ 15 ಕಿಲೋಮೀಟರ್ ಕ್ರಮಿಸಿದರೇ ಗೋವಾ ರಾಜ್ಯದ ಪೆಟ್ರೋಲ್ ಬಂಕ್​ಗಳು ಸಿಗುತ್ತವೆ. ಹೀಗಾಗಿ ಕಾರವಾರದ ಜನ ಇದೀಗ ಕರ್ನಾಟಕದಲ್ಲಿ ಪೆಟ್ರೋಲ್ ,ಡಿಸೇಲ್ ಹಾಕಿಸುವ ಬದಲು ನೇರ ಗೋವಾಕ್ಕೆ ತೆರಳಿ ಪೆಟ್ರೋಲ್, ಡಿಸೇಲ್​ಗಳನ್ನು ವಾಹನಕ್ಕೆ ಟ್ಯಾಂಕ್ ಫುಲ್ ಮಾಡಿಸಿಕೊಂಡು, ಲೀಟರ್ ಗಟ್ಟಲೇ ಕ್ಯಾನ್​ಗಳಲ್ಲಿ ತುಂಬಿಸಿಕೊಂಡು ಮರಳುತಿದ್ದಾರೆ. ಇದರಿಂದ ಗೋವಾ ಭಾಗದಲ್ಲಿರುವ ಪೆಟ್ರೋಲ್ ಬಂಕ್​ಗಳಿಗೆ ಹೆಚ್ಚಿನ ಲಾಭವಾಗುತಿದ್ದು, ಭರ್ಜರಿ ವ್ಯಾಪಾರವಾಗುತ್ತಿದೆ.

ಇದನ್ನೂ ಓದಿ:ತೈಲ ಬೆಲೆ ಏರಿಕೆ: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ದರ ಕಡಿಮೆ; ಸಿಎಂ ಸಮರ್ಥನೆ

ಇನ್ನು ಕಾರವಾರದ ವಾಹನ ಸವಾರರು ಗೋವಾಕ್ಕೆ ತೆರಳುತ್ತಿರುವುದರಿಂದ ಕಾರವಾರದಲ್ಲಿ ಪೆಟ್ರೋಲ್ ಬಂಕ್​ಗಳು ಖಾಲಿ ಹೊಡೆಯುತ್ತಿವೆ. ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚು,ಇದೀಗ ಪೆಟ್ರೋಲ್ ದರ ಕೂಡ ಹೆಚ್ಚಾಗಿದೆ. ಈ ಹಿಂದೆ ಗಡಿ ಭಾಗದ ಕಾರವಾರದ ಜನತೆ, ಗೋವಾ ಮದ್ಯವನ್ನು ಮಾತ್ರ ಅಕ್ರಮವಾಗಿ ತಂದು ಬೇರೆಡೆ ಮಾರಾಟ ಮಾಡುತಿದ್ದರು. ಆದ್ರೆ, ಇದೀಗ ಗೋವಾ ಮದ್ಯದ ಜೊತೆ ಅಕ್ರಮವಾಗಿ ಕ್ಯಾನ್​ಗಳಲ್ಲಿ ಪೆಟ್ರೋಲ್ ,ಡಿಸೇಲ್​ಗಳು ಗೋವಾ ಗಡಿ ದಾಟಿ ಕರ್ನಾಟಕ ಭಾಗಕ್ಕೆ ತರಲಾಗುತ್ತಿದೆ.

ದರ ವ್ಯತ್ಯಾಸ ಎಷ್ಟು?

ಇನ್ನು ಕಾರವಾರದಲ್ಲಿ ಪೆಟ್ರೋಲ್ – 104.70, ಡಿಸೇಲ್ 90.57 ದರವಿದೆ. ಪವರ್ ಪೆಟ್ರೋಲ್ ಗೆ .111.2 ದರವಿದೆ. ಆದ್ರೆ,  ಗೋವಾದಲ್ಲಿ ಪೆಟ್ರೋಲ್ 95.73 ರೂ. ಇನ್ನು ಡಿಸೇಲ್ ಗೆ 88.26 ದರವಿದ್ದರೇ, ಪವರ್ ಡಿಸೇಲ್​ಗೆ 102 .24 ದರವಿದೆ. ಎರಡು ದರ ತುಲನೆ ಮಾಡಿದ್ರೆ, ಗೋವಾದಲ್ಲಿ ಪೆಟ್ರೋಲ್ -8.97 , ಪವರ್ ಪೆಟ್ರೋಲ್-8.96, ಡೀಸೆಲ್ 2.29 ದರ ಕರ್ನಾಟಕ ದರಕ್ಕಿಂತ ಕಡಿಮೆಯಿದೆ. ಹೀಗಾಗಿ ಗೋವಾ ಗಡಿಯ ಸಮೀಪದ ಜನ ಈ ಭಾಗಕ್ಕೆ ಬಂದು ತಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಂಡು ಹೋಗುತಿದ್ದಾರೆ.

ಗೋವಾದಲ್ಲಿ ಕಡಿಮೆ ದರ ಇದೆ. ನಮ್ಮಲ್ಲಿ ಹೆಚ್ಚು ಹೀಗಾಗಿ ಇಲ್ಲಿಗೆ ಬಂದು ಇಂಧನ ತುಂಬಿಸಿಕೊಂಡು ಹೋಕ್ತೀವಿ ಇದರಿಂದ ನಮಗೆ ಉಳಿತಾಯ ಆಗ್ತಿದೆ ಅಂತಾರೆ ಕರ್ನಾಟಕ ಭಾಗದ ಜನ. ಸದ್ಯ ಕರ್ನಾಟಕದಲ್ಲಿ ಇಂಧನ ಬೆಲೆ ಹೆಚ್ಚಾಗುತಿದ್ದಂತೆ ಇದೀಗ ಕಾರವಾರದ ಜನ ಗೋವಾದತ್ತ ಮುಖ ಮಾಡಿದ್ದಾರೆ. ಮದ್ಯದ ಜೊತೆ ಇಂಧನವನ್ನೂ ಹೊತ್ತು ತರುತಿದ್ದು, ರಾಜ್ಯದ ದರ ಬಿಸಿಯ ಬೀಸುವ ದೊಣ್ಣಿಯಿಂದ ತಪ್ಪಿಸಿಕೊಳ್ಳುತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ