ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ! ದಕ್ಷಿಣ ಕನ್ನಡದಲ್ಲಿ ಕೆಲ ಶಾಲೆಗಳಿಗೆ ರಜೆ ಘೋಷಣೆ
ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಯೂ ಇದೆ. ಘಟ್ಟದಲ್ಲಿ ಭೂಕುಸಿತ ಸಾಧ್ಯತೆ ಹಿನ್ನೆಲೆ, ಸುರಕ್ಷಿತವಾಗಿ ವಾಹನ ಸಂಚಾರ ಮಾಡಲು ಜಿಲ್ಲಾಡಳಿತ ಮನವಿ ಮಾಡಿದೆ.
ಕಾರವಾರ: ರಾಜ್ಯದ ಹಲವೆಡೆ ಮಳೆ (Heavy Rain) ಅಬ್ಬರ ಜೋರಾಗಿದ್ದು, ಅವಾಂತರ ಸೃಷ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಅಂಕೋಲಾ, ಜೋಯಿಡಾ, ಕುಮಟಾ, ಕಾರವಾರ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಎರಡು ದಿನಗಳಿಂದ ಬಿಡುವುಕೊಟ್ಟಿದ್ದ ಮಳೆರಾಯ ಇಂದು (ಜುಲೈ 4) ಮತ್ತೆ ಅಬ್ಬರಿಸುತ್ತಿದೆ. ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಯೂ ಇದೆ. ಘಟ್ಟದಲ್ಲಿ ಭೂಕುಸಿತ (Landslide) ಸಾಧ್ಯತೆ ಹಿನ್ನೆಲೆ, ಸುರಕ್ಷಿತವಾಗಿ ವಾಹನ ಸಂಚಾರ ಮಾಡಲು ಜಿಲ್ಲಾಡಳಿತ ಮನವಿ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಳಸ ಬಳಿಯ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೊಡಗಿನಲ್ಲಿ ಮಳೆಯಿಂದ ಮಡಿಕೇರಿ ತಾಲೂಕಿನ ಭಾಗಮಂಡಲ-ನಾಪೋಕ್ಲು ರಸ್ತೆ ಜಲಾವೃತವಾಗಿದೆ. ಈ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲು ಭಾಗಮಂಡಲ ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Ayurveda: ಚಿಕನ್ ತಿಂದ ಬಳಿಕ ಹಾಲು ಕುಡಿಯಬಾರದು, ಆಯುರ್ವೇದ ಏನು ಹೇಳುತ್ತೆ?
ಬೆಳಗ್ಗಿನಿಂದ ಎಡೆ ಬಿಡದೆ ಸುರಿಯುತ್ತಿರೋ ಮಳೆಯಿಂದ ಕೊಡಗಿನಲ್ಲಿ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಆಗಾಗ ಬೀಳುತ್ತಿರುವ ಮಳೆಗೆ ಹಾವೇರಿ ಜನರು ಹೈರಾಣಾಗಿದ್ದಾರೆ. ಇನ್ನು ಕೆಲಕಡೆ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಳೆರಾಯ ಸಂತಸ ಮೂಡಿಸಿದೆ.
ಶಾಲೆಗಳಿಗೆ ರಜೆ ಘೋಷಣೆ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ಮೇರೆಗೆ ತಹಶೀಲ್ದಾರ್ ರಜೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿದ್ದು, ಸ್ನಾನ ಘಟ್ಟದಲ್ಲಿ ನೀರಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.
Published On - 8:30 am, Mon, 4 July 22