ಉತ್ತರ ಕನ್ನಡ, ಜು.04: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಈವರೆಗೆ 6 ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ(Gangubai Manakar) ಹೇಳಿದರು. ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದ ಕುರಿತ ಮಾತನಾಡಿದ ಅವರು, ‘ಈವರೆಗೆ ಹೊನ್ನಾವರದಲ್ಲಿ 4, ಅಂಕೋಲಾ, ಕುಮಟಾದಲ್ಲಿ ತಲಾ ಒಂದು ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ. ಅಲ್ಲಿನವರಿಗೆ ಜಿಲ್ಲಾಡಳಿತದಿಂದಲೇ ಊಟ, ವಸತಿ, ಬಟ್ಟೆ ವ್ಯವಸ್ಥೆ ಮಾಡಿದ್ದೇವೆ ಎಂದರು.
‘ಒಂದು ತಿಂಗಳಿನಿಂದ ಸುರಿದ ಮಳೆಗೆ ಸಾಕಷ್ಟು ಹಾನಿ ಆಗಿದೆ. ಓರ್ವ ಮಹಿಳೆ, ಜಾನುವಾರು ಸಾವನ್ನಪ್ಪಿದ್ದಾರೆ. ಜೊತೆಗೆ 92 ಮನೆಗಳಿಗೆ ಹಾನಿಯಾಗಿದೆ. ಮುಂದಿನ 3 ರಿಂದ 4 ದಿನಗಳ ಕಾಲ ಮಳೆ ಅಬ್ಬರ ಹೆಚ್ಚಾಗಲಿದೆ. ಹೀಗಾಗಿ ತಲಾ 35 ಜನರ ಎರಡು NDRF ತಂಡ ಜಿಲ್ಲೆಗೆ ಆಗಮಿಸುತ್ತಿದೆ. ಇಂದು ಬೆಂಗಳೂರಿನಿಂದ ಎನ್ಡಿಆರ್ಎಫ್ ಸಿಬ್ಬಂದಿ ತೆರಳಿದ್ದು, ನಾಳೆ ಕಾರವಾರ, ಕುಮಟಾ, ಅಂಕೋಲಾಗೆ ಆಗಮಿಸಿ ಹೆಚ್ಚು ಮಳೆ ಬೀಳುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ಜೊಯಿಡಾದ ಕನ್ನೇರಿ ಹಾಗೂ ಕದ್ರಾದ ಡ್ಯಾಂ ಮಟ್ಟ ಹೆಚ್ಚಾಗುತ್ತಿದೆ. ಅಲ್ಲಿನ ಜನರ ರಕ್ಷಣೆಗೆ ಈ ತಂಡ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ಭಾರಿ ಮಳೆ; ಉಡುಪಿ, ಉತ್ತರ ಕನ್ನಡದ ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಇನ್ನು ಜಿಲ್ಲೆಯಲ್ಲಿ 439 ಪ್ರದೇಶಗಳಲ್ಲಿ ಗುಡ್ಡ ಕುಸಿತ ಸಾಧ್ಯತೆಯ ಬಗ್ಗೆ ಗುರುತು ಮಾಡಲಾಗಿತ್ತು. ಭಟ್ಕಳ, ಹೊನ್ನಾವರ ಹಾಗೂ ಕಾರವಾರ ವ್ಯಾಪ್ತಿಯಲ್ಲಿ ಗುಡ್ಡ ಕುಸಿತದ ಭೀತಿ ಹಿನ್ನೆಲೆ ಈಗಾಗಲೇ ಸರಕಾರದಲ್ಲಿ 6.75ಕೋಟಿ ರೂ. ಬೇಡಿಕೆ ಇರಿಸಲಾಗಿದೆ. ಪ್ರವಾಹವನ್ನು ಎದುರಿಸಲು ಕಂದಾಯ ಇಲಾಖೆಯ ತಂಡ ತಯಾರಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಕೂಡ ತೆರೆಯಲಾಗಿದೆ. ಮಳೆಯ ಸಮಸ್ಯೆ ಸಂಭವಿಸಿದಾಗ 1950ಸಂಖ್ಯೆಗೆ ಜನರು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ