ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ: ನೂರಾರು ಮಂದಿಗೆ ಮಕ್ಮಲ್ ಟೋಪಿ; ಕೋಟಿ ರೂ. ವಂಚನೆ
ಉತ್ತರ ಕನ್ನಡದ ಭಟ್ಕಳದಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಭಾರಿ ವಂಚನೆ ಬೆಳಕಿಗೆ ಬಂದಿದೆ. ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳ ಆಮಿಷವೊಡ್ಡಿ ನೂರಾರು ಗ್ರಾಹಕರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ತಮಿಳುನಾಡು ಮೂಲದ ವಂಚಕರು ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾರೆ. ವಂಚನೆ ಬಯಲಾಗುತ್ತಿದ್ದಂತೆ ಗ್ರಾಹಕರು ಅಂಗಡಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತು ದೋಚಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಾರವಾರ, ನವೆಂಬರ್ 05: ಗೃಹೋಪಯೋಗಿ ವಸ್ತುಗಳನ್ನ ಖರೀದಿಸುವಾಗ ಹತ್ತಾರು ಅಂಗಡಿಗಳನ್ನ ವಿಚಾರಿಸುತ್ತೇವೆ. ಆನ್ಲೈನ್ ದರ ಜಾಸ್ತಿಯೋ? ಅಂಗಡಿಯಲ್ಲಿ ಕಡಿಮೆ ಬೆಲೆಗೆ ನೀಡಲಾಗ್ತಿದೆಯೋ ಎಂಬುದನ್ನೂ ನೋಡುತ್ತೇವೆ. ಹೀಗಿರುವಾಗ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಇವನ್ನು ನಿಮಗೆ ನೀಡುತ್ತೇವೆ ಅಂದರೆ ಬೇಡ ಎನ್ನುವವರು ಯಾರು? ಇಂತಹುದ್ದೇ ಆಮಿಷವೊಂದಕ್ಕೆ ಒಳಗಾದ ನೂರಾರು ಮಂದಿಗೆ ವಂಚಕರು ಮಕ್ಮಲ್ ಟೋಪಿ ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ನಡೆದಿದೆ.
ತಿಂಗಳ ಹಿಂದೆ ಭಟ್ಕಳ ಮಾರುಕಟ್ಟೆಯಲ್ಲಿ ಕಟ್ಟಡ ಬಾಡಿಗೆ ಪಡೆದು ತಮಿಳುನಾಡು ಮೂಲದ ಉದಯಕುಮಾರ ಹಾಗೂ ರೆಂಗರಾಜು ಎಂಬವರು ಗ್ಲೋಬಲ ಎಂಟರ್ ಪ್ರೈಸೆಸ್ ಎಂಬ ಶಾಪ್ ಒಂದನ್ನು ಆರಂಭಿಸಿದ್ದರು. ಮಾರುಕಟ್ಟೆಯ ಬೆಲೆಯ ಅರ್ಧ ಬೆಲೆಯಲ್ಲಿ ಮಂಚ, ಫ್ರಿಡ್ಜ್, ವಾಷಿಂಗ್ ಮೆಷಿನ್, ಟೇಬಲ್, ಕುರ್ಚಿ, ಕುಕ್ಕರ್, ಮಿಕ್ಸಿ ಸೇರಿ ಇತರ ಗೃಹೋಪಯೋಗಿ ವಸ್ತುಗಳನ್ನ ನೀಡೋದಾಗಿ ಪ್ರಚಾರ ಮಾಡಿದ್ದರು. ಹಣ ಪಾವತಿಸಿ 10 ದಿನಗಳ ನಂತರ ಸರಕು ಶಿಫ್ಟಿಂಗ್ ಮಾಡುವ ಭರವಸೆ ನೀಡಿದ್ದ ವಂಚಕರು, ಮೊದಲ 3 ವಾರ ತಾವು ಹೇಳಿದಂತೆಯೇ ಗ್ರಾಹಕರಿಗೆ ಸೇವೆ ನೀಡಿದ್ದಾರೆ. ಇದರಿಂದಾಗಿ ಆಮಿಷಕ್ಕೆ ಒಳಗಾದ ನೂರಾರು ಜನರು EMI ರೀತಿ ಹಣ ಕೊಟ್ಟು, ಗೃಹೋಪಯೋಗಿ ವಸ್ತುಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಗ್ಲೋಬಲ್ ಎಂಟರ್ ಪ್ರೈಸೆಸ್ಗೆ ಮುಂಗಡವಾಗಿ ಹಣವನ್ನೂ ವಾಪವತಿಸಿದ್ದಾರೆ. ಆದರೆ, ಕಳೆದ ಕೆಲ ವಾರಗಳಿಂದ ವಸ್ತು ನೀಡದೆ ಕೇವಲ ಹಣ ಪಡೆಯುತ್ತಿದ್ದ ದುರುಳರು, ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ: ಆರೋಪಿಗಳ ಐಷಾರಾಮಿ ಜೀವನ ಕಂಡು ಪೊಲೀಸರಿಗೇ ಶಾಕ್!
ಕೈಗೆ ಸಿಕ್ಕಿದ್ದನ್ನು ದೋಚಿದ ಸಾರ್ವಜನಿಕರು
ವಂಚನೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ವ್ಯಾಪಾರಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅಕ್ಟೋಬರ್ 14ರಂದು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇನ್ನು ತಾವು ಮೋಸ ಹೋದ ವಿಷಯ ಗೊತ್ತಾಗಿದ್ದೇ ತಡ ನೂರಾರು ಜನರು ಅಂಗಡಿಗೆ ನುಗ್ಗಿದ್ದಾರೆ. ಮಳಿಗೆ ಬಾಗಿಲು ಮುರಿದು, ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ. ಈ ವೇಳೆ ಆಕ್ರೋಶಿತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಪ್ರಸಂಗವೂ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



