EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ: ಆರೋಪಿಗಳ ಐಷಾರಾಮಿ ಜೀವನ ಕಂಡು ಪೊಲೀಸರಿಗೇ ಶಾಕ್!
EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟಿ ಕೋಟಿ ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿಗಳಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಚಿನ್ನಾಭರಣ, ನಗದು, ದಾಖಲೆ, ಹೂಡಿಕೆ ಪತ್ರಗಳು ಪತ್ತೆಯಾಗಿವೆ.

ಬೆಂಗಳೂರು, ನವೆಂಬರ್ 05: ರಾಜಾರಾಮ್ ಮೋಹನರಾಯ್ ರಸ್ತೆಯಲ್ಲಿರುವ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಕಬ್ಬನ್ಪಾರ್ಕ್ ಠಾಣೆ ಪೊಲೀಸರು, ಎ1 ಗೋಪಿನಾಥ್, ಎ2 ಜಗದೀಶ್, ಎ7 ಲಕ್ಷ್ಮೀ, ಎ9 ಲಿಂಗೇಗೌಡ, ಎ10 ರಾಮನುಜ ಮನೆಯಲ್ಲಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯ ಕಚೇರಿ, ಆರ್.ಆರ್.ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ 7 ಕಾರು, 12 ಬೈಕ್, ಕೋಟ್ಯಂತರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ಅವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕೋಟ್ಯಂತರ ಮೌಲ್ಯದ ಆಸ್ತಿ, ಫಾರ್ಮ್ ಹೌಸ್ ಮಾಡಿದ್ದು ಕೂಡ ಬೆಳಕಿಗೆ ಬಂದಿದೆ.
ಪ್ರಕರಣ ಏನು?
ಭವಿಷ್ಯಕ್ಕೆ ಸಹಾಯ ಆಗುತ್ತದೆ ಎಂದು ಉಳಿತಾಯದ ಹಣವನ್ನು ತಾವೇ ಮಾಡಿಕೊಂಡಿದ್ದ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿನಲ್ಲಿ ಅನೇಕರು ಹೂಡಿಕೆ ಮಾಡಿದ್ದರು. ಸೊಸೈಟಿಯೂ ಚೆನ್ನಾಗಿಯೇ ನಡೆಯುತ್ತಿತ್ತು. ತಿಂಗಳು, ತಿಂಗಳು ಹಣಕ್ಕೆ ಬಡ್ಡಿಯೂ ಸರಿಯಾಗಿ ಬರುತ್ತಿತ್ತು. ಆದರೆ 3 ತಿಂಗಳಿನಿಂದ ಬಡ್ಡಿ ಬರದೇ ಇದ್ದಾಗ ಅನುಮಾನಗೊಂಡು ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಸೂಸೈಟಿಯಲ್ಲಿದ್ದ ಒಟ್ಟು 73 ಕೋಟಿ ರೂ. ಹೂಡಿಕೆ ಹಣದ ಪೈಕಿ ಬರೋಬ್ಬರಿ 70 ಕೋಟಿ ವಂಚನೆ ನಡೆದಿರುವುದು ಪತ್ತೆಯಾಗಿತ್ತು. ಕೇವಲ 3 ಕೋಟಿ ರೂ. ಹಣ ಬಿಟ್ಟು, ಉಳಿದ ಹಣ ಖಾತೆಯಲ್ಲಿ ಇಲ್ಲ ಎಂಬ ವಿಚಾರ ಬಯಲಾಗಿತ್ತು. ಸಿಇಓ ಗೋಪಿ ಗೌಡ ಮತ್ತು ಅಕೌಂಟೆಂಟ್ ಜಗದೀಶ್ ಸೇರಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೂಡಿಕೆದಾರರು ಆರೋಪಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಗರಣ: 70 ಕೋಟಿ ರೂ. ವಂಚನೆ
ಇನ್ನು ಪ್ರಕರಣ ಸಂಬಂಧ ಸೊಸೈಟಿಯ ಸಿಇಒ ಜಿ.ಗೋಪಿನಾಥ್, ಲೆಕ್ಕಾಧಿಕಾರಿ ಬಿ.ಎಲ್.ಜಗದೀಶ್ ಪತ್ನಿ ಲಕ್ಷ್ಮೀ ಜಗದೀಶ್ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸೊಸೈಟಿಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಜಗದೀಶ್‌ಗೆ ಇದ್ದಿದ್ದು ಕೇವಲ 21 ಸಾವಿರ ರೂ. ಸಂಬಳ. ಹೀಗಿದ್ದರೂ ಆತನ ಮನೆಯಲ್ಲಿಐಷಾರಾಮಿ ಕಾರುಗಳು, ಪತ್ನಿ ಲಕ್ಷ್ಮೀ ಖಾತೆಯಲ್ಲಿ ಕೋಟಿಗಟ್ಟಲೆ ವಹಿವಾಟು ನಡೆದಿರುವುದು ಗೊತ್ತಾಗಿದೆ. ಅನುಮಾನಗೊಂಡು ಅಕೌಂಟ್ ಪರಿಶೀಲಿಸಿದಾಗ, ಸೊಸೈಟಿಯ ಖಾತೆಯಿಂದಲೇ ಲಕ್ಷ್ಮೀ ಅಕೌಂಟ್ಗೆ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Wed, 5 November 25



