ಹೊಸ ವರ್ಷದ ಸಂಭ್ರಮಕ್ಕಾಗಿ ಹರಿದು ಬಂದ ಜನಸಾಗರ: ಜೊಯಿಡಾ, ದಾಂಡೇಲಿಯಲ್ಲಿ ಅಕ್ರಮ ವಾಟರ್ ರ‍್ಯಾಫ್ಟಿಂಗ್ ದಂಧೆ
ಹೊಸ ವರ್ಷಾಚರಣೆ ಸಂಭ್ರಮದ ನಡುವೆ ಭರ್ಜರಿ ಲಾಭ ಮಾಡುವ ಉದ್ದೇಶದಿಂದ ಕೆಲವು ರೆಸಾರ್ಟ್‌ಗಳು ಅಕ್ರಮವಾಗಿ ವೈಟ್ ವಾಟರ್ ರ‍್ಯಾಫ್ಟಿಂಗ್‌ಗಳನ್ನು ನಡೆಸುತ್ತಿವೆ. ಜೊಯಿಡಾ, ದಾಂಡೇಲಿಯಲ್ಲಿ ನಡೆದಿರುವ ಈ ಅಕ್ರಮದ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಪಕ್ಕಾ ಮಾಹಿತಿಯಿದ್ರೂ ನಾಮ ಕೇ ವಾಸ್ತೆ ಪ್ರಕರಣ ದಾಖಲಿಸಿ ಸುಮ್ಮನಿದ್ದಾರೆ
ಹೊಸ ವರ್ಷಾಚರಣೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಜೊಯಿಡಾ, ದಾಂಡೇಲಿಯಲ್ಲಿ (Dandeli, Joida) ಅಕ್ರಮ ರ‍್ಯಾಫ್ಟಿಂಗ್ (water rafting) ಭರ್ಜರಿಯಾಗಿ ನಡೆಯುತ್ತಿದೆ. ರಾಜ್ಯ, ಹೊರ ರಾಜ್ಯಗಳ ವಿವಿಧ ಮೂಲೆಗಳಿಂದ ಜನರು ಅರಣ್ಯ ಸೌಂದರ್ಯದಿಂದ ಕೂಡಿದ ಜೊಯಿಡಾ, ದಾಂಡೇಲಿಯಲ್ಲಿ ತಂಗಿದ್ದು, ಅವರಿಗೆ ವಾಟರ್ ಸ್ಪೋರ್ಟ್ಸ್ ಮಜಾ ನೀಡಲು ಹಾಗೂ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ವೈಟ್ ವಾಟರ್ ರ‍್ಯಾಫ್ಟಿಂಗ್ ನಡೆಸುವ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡಲಾಗುತ್ತಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು, ಹೊಸ ವರ್ಷ ಆಚರಣೆಗೆ ಕಡಲತೀರದತ್ತ ಪ್ರವಾಸಿಗರ ದಂಡೆ ಹರಿದು ಬಂದಿದೆ. ಈ ಸಂಭ್ರಮದ ಮಜಾ ಅನುಭವಿಸಲೆಂದೇ ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಭರ್ಜರಿ ಹಣ ನೀಡಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ರೆಸಾರ್ಟ್, ಹೋಂ ಸ್ಟೇ ಹಾಗೂ ಹೋಟೆಲ್‌ಗಳಲ್ಲಿ ತಂಗಿದ್ದಾರೆ. ಜಿಲ್ಲೆಯ ಜೊಯಿಡಾ ಹಾಗೂ ದಾಂಡೇಲಿ ಪ್ರವಾಸಿಗರ ಫೇವರೇಟ್ ಸ್ಪಾಟ್ ಆಗಿರೋದ್ರಿಂದ ವಾಟರ್ ಸ್ಪೋರ್ಟ್ಸ್ ಮಜಾ ಪಡೆಯಲೆಂದೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು.
ಪ್ರವಾಸಿಗರಿಗೂ ವಾಟರ್ ರ‍್ಯಾಫ್ಟಿಂಗ್ ಮಜಾ ನೀಡಲು ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಕೆಲವು ತಂಡಗಳು ಹಾಗೂ ರೆಸಾರ್ಟ್‌ಗಳು ಅಕ್ರಮವಾಗಿ ವೈಟ್ ವಾಟರ್ ರ‍್ಯಾಫ್ಟಿಂಗ್ ನಡೆಸುತ್ತಿವೆ. ಬೆರಳೆಣಿಕೆಯ ಅನುಮತಿ ಪಡೆದವರ ನಡುವೆ ಅಕ್ರಮವಾಗಿ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಕೇವಲ ಪ್ರವಾಸಿಗರ ಜೀವದ ಜತೆ ಚೆಲ್ಲಾಟವಾಡೋದು ಮಾತ್ರವಲ್ಲದೇ, ಜಿಲ್ಲೆಗೆ ಬರುವ ಪ್ರವಾಸಿಗರಿಂದಲೂ ಭರ್ಜರಿ ಹಣ ಪೀಕಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿಯಿದ್ರೂ ಕೇವಲ ನಾಮ್ ಕೇ ವಾಸ್ತೆ ಒಂದೆರಡು ಫೈನ್ ಹಾಕಿ ಸುಮ್ಮನಿದ್ದಾರೆ.
Also Read: ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
ಅಂದಹಾಗೆ, ಪ್ರವಾಸೋದ್ಯಮ ಇಲಾಖೆಯ ಒಂದು ಸಮಿತಿಯಿದ್ದು, ಈ ಸಮಿತಿಯ ಮೂಲಕವೇ ಶುಲ್ಕ ಪಾವತಿ ಮಾಡಿದವರಿಗೆ ರ‍್ಯಾಫ್ಟಿಂಗ್ ನಡೆಸಲು ಅನುಮತಿ ನೀಡಲಾಗುತ್ತದೆ. ರ‍್ಯಾಫ್ಟಿಂಗ್ ನಡೆಸಲಿಚ್ಛಿಸುವವರು ಅಪ್ಲಿಕೇಶನ್ ಸಲ್ಲಿಸಿದ ಬಳಿಕ ಫೈನಲ್ ಮಾಡಿದ ಶುಲ್ಕ ಪಾವತಿ ಮಾಡಲು ಪತ್ರ ನೀಡಲಾಗುತ್ತದೆ. ಮೊತ್ತ ಸರಕಾರಕ್ಕೆ ಜಮಾ ಮಾಡಿದ ಬಳಿಕ ಅನುಮತಿ ನೀಡಲಾಗುತ್ತದೆ. ಅಪ್ಲಿಕೇಶನ್ ಸಲ್ಲಿಸದೇ ಹಾಗೂ ಸೂಕ್ತ ಮೊತ್ತ ಜಮಾ ಮಾಡದೇ ಅಕ್ರಮವಾಗಿ ರ‍್ಯಾಫ್ಟಿಂಗ್ ನಡೆಸಿದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಈಗಾಗಲೇ ಅಕ್ರಮ ರ‍್ಯಾಫ್ಟಿಂಗ್ ಸಂಬಂಧಿಸಿ ಪ್ರಕರಣವೊಂದು ದಾಖಲಾಗಿದೆ. ಅಕ್ರಮವಾಗಿ ನಡೆಸಿದ್ರೆ ಸೂಕ್ತ ಪ್ರಕರಣ ದಾಖಲಿಸಲಾಗುತ್ತದೆ. ಈಗಾಗಲೇ ಜಮಾ ಮಾಡಿದ ನಂತರವೂ ಅನುಮತಿ ದೊರಕದಂತಹ ಯಾವುದೇ ಪ್ರಕರಣಗಳಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ನಡುವೆ ಭರ್ಜರಿ ಲಾಭ ಮಾಡುವ ಉದ್ದೇಶದಿಂದ ಕೆಲವು ರೆಸಾರ್ಟ್‌ಗಳು ಹಾಗೂ ತಂಡಗಳು ಅಕ್ರಮವಾಗಿ ವೈಟ್ ವಾಟರ್ ರ‍್ಯಾಫ್ಟಿಂಗ್‌ಗಳನ್ನು ನಡೆಸುತ್ತಿವೆ. ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಎಲ್ಲೆಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಗೆ ಪಕ್ಕಾ ಮಾಹಿತಿಯಿದ್ರೂ ಕೇವಲ ನಾಮ ಕೇ ವಾಸ್ತೆ ಪ್ರಕರಣ ದಾಖಲಿಸಿ ಸುಮ್ಮನಿರುವುದು ವಿಪರ್ಯಾಸವೇ ಸರಿ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ