ಉಚಿತ ಯೋಜನೆಗಳು ಅಪಾಯಕಾರಿ, ಯಾವುದನ್ನೂ ಫ್ರೀ ಕೊಡಬಾರದು: ಕಾಂಗ್ರೆಸ್ ಶಾಸಕ ಆರ್ವಿ ದೇಶಪಾಂಡೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಗೆ ಇದೀಗ ಸ್ವತಃ ಕಾಂಗ್ರೆಸ್ ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್.ವಿ. ದೇಶಪಾಂಡೆ ಅವರಿಂದಲೇ ವಿರೋಧ ವ್ಯಕ್ತವಾಗಿದೆ. "ಉಚಿತ ಕೊಡುಗೆಗಳು ಅಪಾಯಕಾರಿ" ಎಂದು ಹೇಳಿರುವ ಅವರು, ಪ್ರತಿ ಸೇವೆಗೂ ಶುಲ್ಕ ವಿಧಿಸಬೇಕೆಂದು ಸಲಹೆ ನೀಡಿದ್ದಾರೆ. ಶಕ್ತಿ ಯೋಜನೆಯನ್ನು ಉದಾಹರಣೆಯಾಗಿಟ್ಟುಕೊಂಡು, ಎಲ್ಲವನ್ನೂ ಉಚಿತವಾಗಿ ನೀಡುವುದರಿಂದ ಸಾರಿಗೆ ಸಂಸ್ಥೆಗಳ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಮಾರ್ಚ್ 29: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ಪ್ರತಿಪಕ್ಷಗಳಿಂದ ಆಗಾಗ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಇದೀಗ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ವಿ ದೇಶಪಾಂಡೆ (RV Deshpande) ಕೂಡ ಉಚಿತ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಚಿತ ಕೊಡುಗೆ ಎಂಬುದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೆರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹೇಳಿಕೆ ನೀಡಿದ್ದಾರೆ.
ಉಚಿತ ಗ್ಯಾರಂಟಿಗಳ ಬಗ್ಗೆ ಆರ್ವಿ ದೇಶಪಾಂಡೆ ಹೇಳಿದ್ದೇನು?
ಉಚಿತ ಕೊಡುಗೆ ಎಂಬುದು ಅಪಾಯಕಾರಿ ಪದ. ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು ಮತ್ತು ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿಪಡಿಸಬೇಕು ಎಂದು ಆರ್ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಈ ಯೋಜನೆಯನ್ನು ಪುರುಷರಿಗೂ ವಿಸ್ತರಿಸಬೇಕೆಂಬ ಬೇಡಿಕೆ ಇತ್ತು. ಎಲ್ಲವನ್ನೂ ಉಚಿತವಾಗಿ ನೀಡಿದರೆ ನಾವು ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಂಬೇವಾಡಿಯ ಕಾರ್ಯಕ್ರಮದ ಬಗ್ಗೆ ಆರ್ವಿ ದೇಶಪಾಂಡೆ ಫೇಸ್ಬುಕ್ನಲ್ಲಿ ಚಿತ್ರ ಸಹಿತ ವಿವರ ಹಂಚಿಕೊಂಡಿದ್ದಾರೆ.
ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರ ಜೊತೆಯಲ್ಲಿ ಇಂದು ದಾಂಡೇಲಿಯ ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಾರಿಗೆ ಇಲಾಖೆಯ ಆಯುಕ್ತರು, ವಾ.ಕ.ರ.ಸಾ.ಸಂ ಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ದೇಶಪಾಂಡೆ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ದೇಶಪಾಂಡೆ ಫೇಸ್ಬುಕ್ ಸಂದೇಶ
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ ₹ 233 ಕೋಟಿ ಖರ್ಚಾಗುತ್ತದೆ: ಸಿದ್ದರಾಮಯ್ಯ
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ ಜಾರಿಗೊಳಿಸಲಾಗಿದೆ. ಉಳಿದಂತೆ ಯುವನಿಧಿ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗಿದೆ. ಉಚಿತ ಯೋಜನೆಗಳ ಜಾರಿಯು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ಅನೇಕ ಕಾಂಗ್ರೆಸ್ ನಾಯಕರೂ ಈಗಾಗಲೇ ಹೇಳಿದ್ದಾರೆ. ಆದಾಗ್ಯೂ, ಯೋಜನೆಗಳನ್ನು ಮುಂದುವರಿಸುವುದಾಗಿ ಸರ್ಕಾರ ಹೇಳಿದೆ.