ಉತ್ತರ ಕನ್ನಡ: ಭಾರಿ ಪ್ರಮಾಣದ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ

ಉತ್ತರ ಕನ್ನಡದಲ್ಲಿ ವನ್ಯಜೀವಿ ಕಳ್ಳಸಾಗಣೆ ಜಾಲವನ್ನು ಶಿರಸಿ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿ ಭೇದಿಸಿದೆ. ಯಲ್ಲಾಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಂಕರ್ ಸಿದ್ದಿ, ನರಸಿಂಹ ಸಿದ್ದಿ ಎಂಬಿಬ್ಬರನ್ನು ಬಂಧಿಸಲಾಗಿದೆ. ಕೋಟ್ಯಂತರ ಮೌಲ್ಯದ 15 ಕೆ.ಜಿ.ಗೂ ಹೆಚ್ಚು ಪ್ಯಾಂಗೋಲಿನ್ ಚಿಪ್ಪುಗಳು, ಹುಲಿ ಹಾಗೂ ಚಿರತೆ ಉಗುರು-ಹಲ್ಲುಗಳು, ಕಾಡೆಮ್ಮೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ.

ಉತ್ತರ ಕನ್ನಡ: ಭಾರಿ ಪ್ರಮಾಣದ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ
ವನ್ಯಜೀವಿ ಕಳ್ಳಸಾಗಣೆ
Image Credit source: Tv9 kannada
Edited By:

Updated on: Sep 09, 2026 | 12:45 PM

ಕಾರವಾರ, ಸೆ.9: ರಾಜ್ಯದಲ್ಲಿ ಪ್ರಾಣಿಗಳ ದೇಹದ ಭಾಗಗಳು ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇತ್ತೀಚೆಗೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಕೂಡ ಪತ್ತೆಯಾಗಿತ್ತು. ಚಿಪ್ಪುಹಂದಿ ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರನ್ನು ಪತ್ತೆ ಮಾಡಿ ಬಂಧಿಸಲಾಗಿತ್ತು. ಇದೀಗ ಇಂತಹದೇ ಮತ್ತೊಂದು ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿಗಳ ದೇಹದ ಭಾಗಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಭಾರಿ ಪ್ರಮಾಣದ ವನ್ಯಜೀವಿ ಉತ್ಪನ್ನಗಳೊಂದಿಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ವನ್ಯಜೀವಿ ಉತ್ಪನ್ನಗಳ ಅಕ್ರಮ ಮಾರಾಟ ಹಾಗೂ ಸಾಗಾಟ ನಡೆಯುತ್ತಿರುವ ಕುರಿತು ಲಭಿಸಿದ ಖಚಿತ ಮಾಹಿತಿ ಆಧರಿಸಿ, ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದರು. ಕಾರ್ಯಾಚರಣೆ ವೇಳೆ ಕಳ್ಳಸಾಗಣೆಯಲ್ಲಿ ತೊಡಗಿದ್ದ ಶಂಕರ್ ಸಿದ್ದಿ ಮತ್ತು ನರಸಿಂಹ ಸಿದ್ದಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ದಾಳಿ ನಡೆಸಿದ ಅಧಿಕಾರಿಗಳು ಬಂಧಿತರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯಜೀವಿ ಉತ್ಪನ್ನಗಳು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ 15.748 ಕೆಜಿಯ ಪ್ಯಾಂಗೋಲಿನ್ (ಅಳಲು/ಚಿಪ್ಪು ಹಂದಿ) ಚಿಪ್ಪುಗಳು, 8 ಹುಲಿ ಉಗುರುಗಳು, 12 ಚಿರತೆ ಉಗುರುಗಳು, 2 ಹುಲಿ ಹಲ್ಲುಗಳು, 3 ಚಿರತೆ ಹಲ್ಲುಗಳು, 6 ಕಾಡುಹಂದಿ ಹಲ್ಲುಗಳು, 2 ಭಾರತೀಯ ಕಾಡೆಮ್ಮೆ ಕೊಂಬುಗಳು, 1 ಬೈಕ್ ಹಾಗೂ 1 ಸ್ಕೂಟರ್ ಪತ್ತೆ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ.

ಇದನ್ನೂ ಓದಿ: ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್

ಮುಂದುವರಿದ ತನಿಖೆ: ಉಳಿದ ಆರೋಪಿಗಳಿಗೆ ಬಲೆ

ಈ ವನ್ಯಜೀವಿ ಕಳ್ಳಸಾಗಣೆ ಜಾಲದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಾಳಿಯ ಸುಳಿವು ಅರಿತು ಇತರ ಕೆಲವು ಶಂಕಿತ ವ್ಯಕ್ತಿಗಳು ಸ್ಥಳದಿಂದ ತಲೆಮರೆಸಿಕೊಂಡಿದ್ದು, ಅವರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, (Wildlife Protection Act, 1972) ರ ಸಂಬಂಧಿತ ಕಠಿಣ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us