ಉತ್ತರ ಕನ್ನಡ, ಮಾ.27: ಕಾರವಾರ ಅಬಕಾರಿ ಡಿಸಿ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ(Lokayukta) ದಾಳಿ ಆಗುತ್ತಿದ್ದಂತೆ ಅಬಕಾರಿ ಡಿಸಿ ಎಮ್.ರೂಪಾ ನಾಪತ್ತೆಯಾಗಿದ್ದಾರೆ. ಬೆಳ್ಳಂ ಬೆಳಿಗ್ಗೆ ಏಕಕಾಲಕ್ಕೆ ಉಡುಪಿ ಮತ್ತು ಕಾರವಾರದ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ, ಈವರೆಗೂ ಅಬಕಾರಿ ಡಿಸಿ M.ರೂಪಾ ಕಚೇರಿ ಹಾಗೂ ಮನೆಗೆ ಬಂದಿಲ್ಲ. ಈ ಹಿನ್ನಲೆ ಕಚೇರಿ ಸಿಬ್ಬಂದಿ ಕರೆದು ಸತತ 6 ಗಂಟೆಯಿಂದ ಅಧಿಕಾರಿಗಳು ದಾಖಲೆ ಕಲೆ ಹಾಕುತ್ತಿದ್ದಾರೆ.
ಬೀದರ್, ಕಲಬುರಗಿ, ವಿಜಯಪುರ, ಧಾರವಾಡ, ಕೋಲಾರ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಅದರಂತೆ ಭಾಲ್ಕಿ ಕಾರಂಜಾ ವಿಭಾಗದ ಇಇ ಶಿವಕುಮಾರ್ ಸ್ವಾಮಿಗೆ ಸೇರಿದ ಮನೆಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೆಕಾರ್ ನೇತ್ರತ್ವದ ಸಿಬ್ಬಂದಿಯಿಂದ ದಾಳಿ ನಡೆಸಿದ್ದು, ಜೊತೆಗೆ ಕಲಬುರಗಿ ನಗರದ ಎಂ.ಬಿ.ಕಾಲೋನಿಯ ಮನೆಯಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಬೀದರ್ ಮತ್ತು ಕಾರವಾರದ ಇಬ್ಬರು ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ
ರಾಮನಗರ: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ರಾಮನಗರ ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಪಿಡಿಒ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಜೊತೆಗೆ ಪಿಡಿಒ ಯತೀಶ್ ಚಂದ್ರಗೆ ಸಂಬಂಧಪಟ್ಟ ಮೈಸೂರು ಮತ್ತು ಚನ್ನಪಟ್ಟಣ ಸೇರಿದಂತೆ 7 ಕಡೆ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿಯೇ ಎರಡು ಮನೆ ಹೊಂದಿರುವ ಯತೀಶ್, ಇದೀಗ ಪತ್ನಿ ಹೆಸರಲ್ಲಿ 5 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮನೆ ಕಟ್ಟಿಸ್ತಿದ್ದಾರೆ. ಈ ಹಿನ್ನಲೆ ಈಗಲ್ಟನ್ ರೆಸಾರ್ಟ್ನಲ್ಲಿ PDO ಯತೀಶ್ ಚಂದ್ರ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಧಾರವಾಡದಲ್ಲಿ ಅರಣ್ಯ ಅಧಿಕಾರಿ ಮಹೇಶ್ ಎಂಬುವವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಮೂಕಾಂಬಿಕಾ ನಗರದಲ್ಲಿರುವ ಮಹೇಶ್ ಹಿರೇಮಠ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಶಂಕರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ