ಸ್ಪೋರ್ಟ್ಸ್ ಅಂಗಡಿಗೆ ಪಾಕಿಸ್ತಾನ ಉಲ್ಲೇಖಿತ ಬರಹ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು​: ಸ್ಥಳೀಯರಲ್ಲಿ ಆತಂಕ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಅಪರಿಚಿತ ನಿಗೂಢ ಬರಹದ ಪೋಸ್ಟರ್ ಅಂಟಿಸಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.

ಸ್ಪೋರ್ಟ್ಸ್ ಅಂಗಡಿಗೆ ಪಾಕಿಸ್ತಾನ ಉಲ್ಲೇಖಿತ ಬರಹ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು​: ಸ್ಥಳೀಯರಲ್ಲಿ ಆತಂಕ
ಅಪರಿಚಿತ ನಿಗೂಢ ಬರಹದ ಪೋಸ್ಟರ್

Updated on: Jun 04, 2023 | 5:38 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಅಪರಿಚಿತ ನಿಗೂಢ ಬರಹದ ಪೋಸ್ಟರ್ (poster) ಅಂಟಿಸಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ನಗರದ ಬಂಡೀಬಜಾರದ ಸ್ಪೋರ್ಟ್ಸ್ ಅಂಗಡಿಯೊಂದರ ಗೋಡೆಯ ಮೇಲೆ ಮೂರು ಪೋಸ್ಟರಗಳನ್ನ ಅಂಟಿಸಿದ್ದು, ಬೆಳಿಗ್ಗೆ ಸ್ಥಳೀಯರು ಗಮನಿಸಿದ ಬಳಿಕ ಈ ಸುದ್ದಿ ನಗರದಾದ್ಯಂತ ಹರಡಿದೆ. ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್‌ನಿಂದ ಇಂಗ್ಲೀಷ್ ಹಾಗೂ ಕನ್ನಡ ಮಿಶ್ರಿತವಾಗಿ ಬರೆದಿರುವ ಬರಹ ನಿಗೂಢವಾಗಿದ್ದು, ಓದಿದರೆ ಸರಿಯಾಗಿ ಅರ್ಥವಾಗುತ್ತಿಲ್ಲ.

ಬರಹದಲ್ಲಿ ಸಂಗ್ಲಾನಿ ವೆಲಫೇರ್ ಟ್ರಸ್ಟ್ ಎಂದು ಬರೆದಿದ್ದು, ಅದರ ಕೆಳಗೆ ಬ್ರ್ಯಾಕೆಟ್‌ನಲ್ಲಿ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆಯಲಾಗಿದೆ. ಜೊತೆಗೆ ಪಟ್ಟಣದ ಪಿ.ಎಂ ಹೈಸ್ಕೂಲ್, ಜೈ ಹಿಂದ್ ಹೈಸ್ಕೂಲ್ ಹೆಸರನ್ನ ಉಲ್ಲೇಖಿಸಿದ್ದು ಫಾರೆಸ್ಟ್, ಪೊಲೀಸ್ ಶಬ್ದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆದಿದ್ದು ಯಾವುದೇ ಹೆಸರನ್ನ ಉಲ್ಲೇಖಿಸಿಲ್ಲ.

ಇದನ್ನೂ ಓದಿ: Uttara Kannada: ಜಿಲ್ಲಾಕೇಂದ್ರಕ್ಕೆ ಸಂಪರ್ಕಿಸುವ ಮೂರ್ನಾಲ್ಕು ರಸ್ತೆಗಳಲ್ಲೇ ಗುಡ್ಡಕುಸಿತದ ಭಯ; ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ

ನೂರು ಬಿಲಿಯನ್ ಡಾಲರ್

ಇನ್ನೊಂದು ಪೋಸ್ಟರನಲ್ಲಿ ಬರೆದಿದ್ದು ಅಲ್ಪ ಸ್ವಲ್ಪ ಅಳಿಸಿ ಹೋಗಿದೆ. ಮೂರನೇ ಪೋಸ್ಟರನಲ್ಲಿ ಹೈಸ್ಕೂಲ್ ಗರ್ಲ್ಸ್ ಎಂಡ್ ಬಾಯ್ಸ ಎಂದು ಬರೆಯಲಾಗಿದೆ. ಹಾಗೂ ನೂರು ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ. ಮೇಲ್ನೋಟಕ್ಕೆ ಯಾರೋ ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತಿದ್ದು ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಈ ಬರಹ ಅಂಟಿಸಿದವರನ್ನ ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಮೀನುಗಾರಿಕೆ ನಿಷೇಧ: ಪ್ರತಿ ವರ್ಷ 2 ತಿಂಗಳು ಬಂದ್ ಆಗುವುದ್ಯಾಕೆ? ಇಲ್ಲಿದೆ ಅಸಲಿ ಕಾರಣ

ಜನರಲ್ಲಿ ಆತಂಕ

ಅಪರಿಚಿತ ನಿಗೂಢ ಬರಹದ ಬಗ್ಗೆ ಸದ್ಯ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದನ್ನು ಯಾರು ಬರೆದರು ಮತ್ತು ಯಾವಾಗ ಅಂಟಿಸಿದರು ಎಂಬುದು ತಿಳಿದಿಲ್ಲ. ಆದರೆ ಬರಹದಲ್ಲಿ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಇದನ್ನು ಇಲ್ಲಿಗೆ ಬಿಡದೆ ಸೂಕ್ತ ತನಿಖೆ ನಡೆಸಿ ಪೋಸ್ಟರ್​ ಬರೆದು ಅಂಟಿಸಿದವರನ್ನು ಪತ್ತೆ ಹಚ್ಚಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.