ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಅಬ್ದುಲ್​ ಸುಕ್ಕೂರ್ ಎನ್ಐಎ ವಶಕ್ಕೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ದಾಸನಕೊಪ್ಪ ನಿವಾಸಿ ಅಬ್ದುಲ್​ ಸುಕ್ಕೂರ್ ಎಂಬುವರ ಮನೆ ಮೇಲೆ ಎನ್​ಐಎ ಅಧಿಕಾರಿಗಳು ಇಂದು (ಜೂ.18) ಬೆಳ್ಳಂ ಬೆಳಗ್ಗೆ ಏಕಾಏಕಿ ದಾಳಿ ಮಾಡಿದರು. ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಬ್ದುಲ್​ ಸುಕ್ಕೂರ್​ ಅವರನ್ನು ಎನ್​ಐಎ ವಶಕ್ಕೆ ಪಡೆದುಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಅಬ್ದುಲ್​ ಸುಕ್ಕೂರ್ ಎನ್ಐಎ ವಶಕ್ಕೆ
ಎನ್​ಐಎ
Updated By: ವಿವೇಕ ಬಿರಾದಾರ

Updated on: Jun 18, 2024 | 2:28 PM

ಕಾರವಾರ, ಜೂನ್​ 18: ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಂದು (ಜೂ.18) ಬೆಳ್ಳಂ ಬೆಳಗ್ಗೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿ (Sirasi) ತಾಲೂಕಿನ ಬನವಾಸಿಯಲ್ಲಿನ (Banavasi) ಓರ್ವ ಮನೆ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರವ ಆರೋಪದ ಮೇಲೆ ಅಬ್ದುಲ್ ಸುಕ್ಕೂರ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್​ ಸುಕ್ಕೂರ್​ ಬನವಾಸಿಯ ದಾಸನಕೊಪ್ಪದಲ್ಲಿರುವ ನಿವಾಸಿಯಾಗಿದ್ದಾರೆ. ಅಬ್ದುಲ್ ಸುಕ್ಕೂರ್ ದುಬೈನಲ್ಲಿ ಕೆಲಸ ಮಾಡುತಿದ್ದು ಬಕ್ರೀದ್​ ಹಬ್ಬ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದರು.

ಅಬ್ದುಲ್ ಸುಕ್ಕೂರ್ ಆನ್​ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್​ಗೆ ನಕಲಿ ದಾಖಲೆಗಳನ್ನು ನೀಡಿದ ಬಗ್ಗೆ ಎನ್​​ಐಎ ಮಾಹಿತಿ ಪಡೆದುಕೊಂಡಿದೆ. ಅಬ್ದುಲ್ ಸುಕ್ಕೂರ್ ಕೂಡ ಭಾರತಕ್ಕೆ ಮರಳಿದ್ದು, ಸ್ವಗ್ರಾಮಕ್ಕೆ ಬಂದಿದ್ದ ವಿಚಾರವನ್ನು ತಿಳಿದು ಐವರು ಎನ್​ಐಎ ಅಧಿಕಾರಿಗಳು ಇಂದು (ಜೂ.18) ಬೆಳಿಗ್ಗೆ ಶಿರಸಿ ಡಿವೈಎಸ್ ಪಿ ಕಚೇರಿಗೆ ಬಂದಿದ್ದಾರೆ. ಇಲ್ಲಿ, ಅಬ್ದುಲ್ ಸುಕ್ಕೂರ್​ ಗ್ರಾಮಕ್ಕೆ ಬಂದಿರುವ ಬಗ್ಗೆ ಮತ್ತೊಮ್ಮೆ ಖಚಿತ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ, ಪಾಸಪೊರ್ಟ್​ಗೆ ನಕಲಿ ದಾಖಲೆ ನೀಡಿರುವ ಬಗ್ಗೆ ದೃಢವಾಗಿದೆ. ಬಳಿಕ ಶಿರಸಿ ಹಾಗೂ ಬನವಾಸಿ ಪೊಲೀಸರ ಸಹಕಾರದಿಂದ ದಾಳಿ ಮಾಡಿ, ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಖಲಿಫೇಟ್, ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್: ಬಳ್ಳಾರಿ ಉಗ್ರರ ಬಗ್ಗೆ ಎನ್​ಐಎ ಸ್ಫೋಟಕ ಮಾಹಿತಿ

ಅಬ್ದುಲ್ ಶುಕ್ಕೂರ್ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದಾನೆ. ಅಬ್ದುಲ್ ಸುಕ್ಕೂರ್ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಪ್ರಚೋದನೆ ನೀಡಿರುವ ಆರೋಪ‌ ಕೇಳಿಬಂದಿದೆ.

ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್​ ಸ್ಫೋಟ ಸಂಭವಿಸಿತ್ತು. ಇದೇ ವರ್ಷ ಮಾರ್ಚ್​ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಎರಡೂ ಪ್ರಕರಣದ ತನಿಖೆಯನ್ನು ಎನ್​ಐಎ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಅಬ್ದುಲ್​ ಸುಕ್ಕೂರ್​ ಭಾಗಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬ್ದುಲ್ ಸುಕ್ಕೂರ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:58 pm, Tue, 18 June 24