ಭಟ್ಕಳ: ಹಿಜಾಬ್ ತೀರ್ಪು ಹಿನ್ನೆಲೆ ಬಲವಂತವಾಗಿ ಅಂಗಡಿ ಬಂದ್; ಪಿಎಫ್​ಐ ಕಾರ್ಯಕರ್ತರು, ವಕೀಲನ ವಿರುದ್ಧ ಪ್ರಕರಣ ದಾಖಲು

| Updated By: ganapathi bhat

Updated on: Mar 16, 2022 | 12:24 PM

ಪಿ.ಎಫ್.ಐ ಸಂಘಟನೆಯ ಅಜೀಮ್ ಅಹ್ಮದ್, ಮೊಹಿದ್ದಿನ್ ಅಬೀರ್ ಹಾಗೂ ಶಾರೀಕ್, ವಕೀಲ ತೈಮೂರ್ ಹುಸೇನ್ ಗವಾಯಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 143, 147, 290 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಭಟ್ಕಳ: ಹಿಜಾಬ್ ತೀರ್ಪು ಹಿನ್ನೆಲೆ ಬಲವಂತವಾಗಿ ಅಂಗಡಿ ಬಂದ್; ಪಿಎಫ್​ಐ ಕಾರ್ಯಕರ್ತರು, ವಕೀಲನ ವಿರುದ್ಧ ಪ್ರಕರಣ ದಾಖಲು
ಹಿಜಾಬ್ ತೀರ್ಪು: ಭಟ್ಕಳದಲ್ಲಿ ಅಂಗಡಿ ಮುಂಗಟ್ಟುಗಳ ಬಂದ್
Follow us on

ಕಾರವಾರ: ಹಿಜಾಬ್ ಪ್ರಕರಣ ಸಂಬಂಧ ತೀರ್ಪು ಪ್ರಕಟ ಹಿನ್ನೆಲೆ ಭಟ್ಕಳ ಬಂದ್ ಮಾಡಿಸಲಾಗಿತ್ತು. ಈ ಹಿನ್ನೆಲೆ ಇದೀಗ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಸೇರಿ ವಕೀಲನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಭಟ್ಕಳ ನಗರದ ಮುಖ್ಯ ರಸ್ತೆಯಲ್ಲಿ ವರ್ತಕರಿಗೆ ಮಳಿಗೆಗಳನ್ನು ಬಂದ್ ಮಾಡುವಂತೆ ನಿನ್ನೆ (ಮಾರ್ಚ್ 15) ಬಲವಂತ ಪಡಿಸಿದ್ದ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಹಾಗೂ ವಕೀಲ ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪಿ.ಎಫ್.ಐ ಸಂಘಟನೆಯ ಅಜೀಮ್ ಅಹ್ಮದ್, ಮೊಹಿದ್ದಿನ್ ಅಬೀರ್ ಹಾಗೂ ಶಾರೀಕ್, ವಕೀಲ ತೈಮೂರ್ ಹುಸೇನ್ ಗವಾಯಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 143, 147, 290 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತೊಂದೆಡೆ ಹಿಜಾಬ್ ಕುರಿತು ವ್ಯತಿರಿಕ್ತ ತೀರ್ಪು ಹಿನ್ನಲೆ, ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತ ಬಂದ್‌ಗೆ ಮುಂದಾಗಿದ್ದಾರೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಹೈಕೋರ್ಟ್‌ನ ತೀರ್ಪು ವಿರೋಧಿಸಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ತಂಜಿಮ್ ಸಂಘಟನೆ ಮನವಿ ಮಾಡಿತ್ತು. ತಂಜಿಮ್ ಸಂಘಟನೆಯ ಮನವಿಗೆ ಸ್ಪಂದಿಸಿ ಕೆಲವು ಅಂಗಡಿ ಮುಂಗಟ್ಟುಗಳ ಬಂದ್ ಮಾಡಲಾಗಿದೆ. ಬಂದ್ ಕರೆ ಹಿನ್ನಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಮುಂಜಾಗ್ರತೆ ವಹಿಸಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ಶಾಲಾ ಕಾಲೇಜು ಎಂದಿನಂತೆ ಆರಂಭ; ಬಿಗಿ ಪೊಲೀಸ್ ಬಂದೋಬಸ್ತ್

ಹೈಕೋರ್ಟ್ ‌ಹಿಜಾಬ್ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಇಂದು ಎಂದಿನಂತೆ ಶಾಲಾಕಾಲೇಜು ಆರಂಭಗೊಂಡಿದೆ. ನಿನ್ನೆ ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಂದು ಎಂದಿನಂತೆ ಶಾಲಾ ಕಾಲೇಜು ಆರಂಭವಾಗಿದೆ. ಹೈಕೋರ್ಟ್ ಆದೇಶವನ್ನು ಗೌರವಿಸಿ ಪಾಲಿಸಲು ಜಿಲ್ಲಾಧಿಕಾರಿ ಕೋರಿಕೊಂಡಿದ್ದಾಆರೆ. ಈಗಾಗಲೇ ಜಾರಿಯಲ್ಲಿ ಇರುವ ನಿಷೇಧ ಮುಂದುವರಿಕೆ ಆಗಲಿದೆ. ಯಾವುದೇ ಸಂಭ್ರಮ ಆಚರಣೆ, ಪ್ರತಿಭಟನೆ, ಮೆರವಣಿಗೆಗೆ ನಿಷೇಧ ಹೇರಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶ ನೀಡಿದ್ದಾರೆ.

ಜಿಲ್ಲೆಯ ಶಾಲಾ ಕಾಲೇಜು ವ್ಯಾಪ್ತಿಯ 200 ಮೀಟರ್​ನಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ 3 ಕೆಎಸ್​ಆರ್​ಪಿ, 5 ಡಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ರೌಂಡ್ಸ್​ನಲ್ಲಿ ಇರುವಂತೆ ಎಸ್ ಪಿ ವಿಷ್ಣುವರ್ಧನ್ ಸೂಚನೆ ಕೊಟ್ಟಿದ್ದಾರೆ. ಶಾಲಾ ಕಾಲೇಜು ಬಳಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಇತ್ತ ಶಿವಮೊಗ್ಗದಲ್ಲಿ ಕೂಡ ಶಾಲಾ ಕಾಲೇಜು ಎಂದಿನಂತೆ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ವಿಜಯಪುರ: ತರಗತಿಗಳು ಆರಂಭ; ಸೆಕ್ಷನ್ 144 ಮುಂದುವರಿಕೆ

ತರಗತಿಗಳಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂದು ಹೈಕೋರ್ಟ್ ತೀರ್ಪು ನೀಡಲಾಗಿದೆ. ಹಿಜಾಬ್ ಪರ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ. ಈ ಮಧ್ಯೆ, ವಿಜಯಪುರ ಜಿಲ್ಲೆಯಲ್ಲಿ ತರಗತಿಗಳು ಸಹಜವಾಗಿ ಆರಂಭವಾಗಿದೆ. ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ ನೀಡಿಲ್ಲ. ಜಿಲ್ಲೆಯ 225 ಪಿಯು ಕಾಲೇಜುಗಳು 80 ಡಿಗ್ರಿ ಕಾಲೇಜುಗಳಲ್ಲಿ ಎಂದಿನಂತೆ ತರಗತಿಗಳು ಆರಂಭವಾಗಿದೆ. ಕಾಲೇಜಿನವರೆಗೆ ಹಿಜಾಬ್ ಧರಿಸಿ ಆಗಮಿಸುತ್ತಿರೋ ವಿದ್ಯಾರ್ಥಿನಿಯರು, ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 19 ರವರೆಗೂ ಜಿಲ್ಲೆಯ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ‌ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ: ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋದ ವಿದ್ಯಾರ್ಥಿನಿ

ಇದನ್ನೂ ಓದಿ: ಹಿಜಾಬ್​: ಹೈಕೋರ್ಟ್​ ಆದೇಶ ಒಪ್ಪಲೇಬೇಕು, ರಾಜಕೀಯ ಲಾಭ-ನಷ್ಟದ ಬಗ್ಗೆ ಯೋಚನೆ ಮಾಡಲ್ಲ -ಜೆಡಿಎಸ್ ವರಿಷ್ಠ ದೇವೇಗೌಡ

Published On - 9:07 am, Wed, 16 March 22