The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ ಮಾಡುವಂತೆ ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ
Bhatkal: ಭಟ್ಕಳ ನಗರದಲ್ಲಿ ಭಾನುವಾರ ಚಿತ್ರಮಂದಿರವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನ ನಡೆಸುವಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಚಿತ್ರದ ಪ್ರದರ್ಶನ ಇನ್ನೂ ಆರಂಭವಾಗಿಲ್ಲ. ಈ ಕುರಿತ ವರದಿ ಇಲ್ಲಿದೆ.
‘ದಿ ಕಾಶ್ಮೀರ ಫೈಲ್ಸ್’ (The Kashmir Files) ಚಿತ್ರವನ್ನು ಪ್ರದರ್ಶನ ಮಾಡುವಂತೆ ಹಿಂದೂ ಪರ ಸಂಘಟನೆಗಳಿಂದ ಪುಷ್ಪಾಂಜಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಿದ ಘಟನೆ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದಲ್ಲಿ ಭಾನುವಾರ (ಮಾ.13) ನಡೆದಿದೆ. ಚಿತ್ರಮಂದಿರಲ್ಲಿ ‘ರಾಧೆ ಶ್ಯಾಮ್’ ಚಿತ್ರ ಪ್ರದರ್ಶನ ಗೊಳ್ಳುತ್ತಿದ್ದು ಅದನ್ನ ಸ್ಥಗಿತಗೊಳಿಸಿ, ಕಾಶ್ಮೀರಿ ಪಂಡಿತರ ನೈಜ ಚಿತ್ರಕಥೆ ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನಗೊಳಿಸಬೇಕು ಎಂದು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಹಿಂದೂ ಪರ ಸಂಘನೆಗಳು ಒತ್ತಾಯ ಮಾಡಿವೆ. ‘‘ಇತಿಹಾಸ ಮುಚ್ಚಿಟ್ಟಂತಹ ಕಾಶ್ಮೀರಿ ಪಂಡಿತರ ನೈಜ ಚಿತ್ರಕಥೆಯನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರವನ್ನ ಪ್ರದರ್ಶನ ಮಾಡಲೇಬೇಕು, ಇಲ್ಲವಾದಲ್ಲಿ ಮುಂದಿನ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ’’ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮಧ್ಯಾಹ್ನ 2.30 ಕ್ಕೆ ಪ್ರದರ್ಶನಗೊಳ್ಳುತ್ತಿದ್ದ ‘ರಾಧೆ ಶ್ಯಾಮ್’ ಸ್ಥಗಿತಗೊಳಿಸಿ ಹಿಂದೂ ಪಂಡಿತರ ನೈಜ ಕತೆಯನ್ನು ಆಧಾರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶಿಸುವಂತೆ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದರು. ನಂತರ ಕಾರ್ಯಕರ್ತರು ಹಾಗೂ ಚಿತ್ರಮಂದಿರದ ಮೇಲ್ವಿಚಾರಕರ ನಡುವೆ ಮಾತುಕತೆ ನಡೆದು ಕೊನೆಗೆ ರಾತ್ರಿ 8.45 ರ ಚಿತ್ರ ಪ್ರದರ್ಶನಕ್ಕೆ ‘ದಿ ಕಶ್ಮೀರಿ ಫೈಲ್ಸ್’ ಚಿತ್ರವನ್ನು ಪ್ರದರ್ಶಿಸಲಾಗುವುದೆಂದು ಭರವಸೆಯನ್ನು ನೀಡಲಾಗಿತ್ತು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, ‘‘ಇತಿಹಾಸದಲ್ಲಿ ಮುಚ್ಚಿಟ್ಟಂತಹ ಕಾಶ್ಮೀರಿ ಪಂಡಿತರ ನೈಜ ಚಿತ್ರ ಕತೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗೆ ಅನಾವರಣ ಮಾಡಿದ್ದಾರೆ. ಆದರೆ ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ ಚಿತ್ರ ಮಂದಿರ ಹೌಸ್ ಫುಲ್ ಎಂಬ ಬೋರ್ಡ ಹಾಕುವುದರ ಮೂಲಕ ಷಡ್ಯಂತರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ‘ದ ಕಶ್ಮೀರಿ ಫೈಲ್ಸ್’ ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಹೊಣೆಗೆ ಅವರೇ ಹೊಣೆಗಾರರಾಗುತ್ತಾರೆ’’ ಎಂದರು.
ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ, ಶ್ರೀನಿವಾಸ ಹನುಮಾನಗರ, ರಾಜೇಶ, ಪಾಂಡುರಂಗ ನಾಯ್ಕ , ಕೃಷ್ಣ ಕಂಚುಗಾರ, ನಾಗೇಶ ನಾಯ್ಕ ಚೌಥನಿ ದಿನೇಶ ಮೊಗೇರ ಜಾಲಿ, ಮೋಹನ ನಾಯ್ಕ, ಅರುಣ ನಾಯ್ಕ, ವಿವೇಕ ನಾಯ್ಕ ಜಾಲಿ, ಬಾಬು ಕಾರಗದ್ದೆ, ವಸಂತ ಜಂಬೂರ್ ಮಠ ಮುಂತಾದವರು ಉಪಸ್ಥಿತರಿದ್ದರು.
ತಾಂತ್ರಿಕ ಕಾರಣದಿಂದ ಭಟ್ಕಳದಲ್ಲಿ ಇನ್ನೂ ಪ್ರದರ್ಶನ ಆರಂಭಿಸಿದ ‘ದಿ ಕಾಶ್ಮೀರ್ ಫೈಲ್ಸ್’:
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನಕ್ಕೆ ಕಾರ್ಯಕರ್ತರು ಆಗ್ರಹಿಸಿ ಎರಡು ದಿನ ಕಳೆದಿದ್ದು, ಚಿತ್ರದ ಪ್ರದರ್ಶನ ಇನ್ನೂ ಆರಂಭವಾಗಿಲ್ಲ. ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಿತ್ರವಾಗಿದ್ದು, ಕರ್ನಾಟಕದ ನಗರ ಭಾಗದ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ರಾದೇಶಿಕ ಸ್ಥಳಗಳ ಸಿಂಗಲ್ ಸ್ಕ್ರೀನ್ಗಳಲ್ಲಿ ತೆರೆ ಕಾಣಲು ತುಸು ಸಮಯ ಬೇಕಾಗಬಹುದು ಎನ್ನಲಾಗಿದ್ದು, ಚಿತ್ರ ಲಭ್ಯವಾದ ನಂತರ ಪ್ರಸಾರ ಮಾಡುವುದಾಗಿ ತಿಳಿಸಲಾಗಿದೆ. ಭಟ್ಕಳದ ಚಿತ್ರಮಂದಿರದವರು ಕೂಡ ಇದೇ ಕಾರಣದಿಂದ ಚಿತ್ರದ ಪ್ರದರ್ಶನವನ್ನು ಆರಂಭಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು