PM Modi: ‘ಇದನ್ನು ಎಲ್ಲರೂ ನೋಡಬೇಕು’; ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ವಿಶೇಷ ಮಾತು
The Kashmir Files | Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ದೇಶಾದ್ಯಂತ ಸಖತ್ ಸುದ್ದಿಯಾಗಿದೆ. ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿರುವ ಈ ಸಿನಿಮಾವನ್ನು ಬಹುತೇಕರು ಇಷ್ಟಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಚಿತ್ರತಂಡ ಭೇಟಿ ಮಾಡಿತ್ತು. ಈ ವೇಳೆ ಅವರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಖುದ್ದು ಪ್ರಧಾನಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಹಿರಂಗವಾಗಿ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಾ, ‘ದಿ ಕಾಶ್ಮೀರ್ ಫೈಲ್ಸ್’ ಉತ್ತಮ ಚಿತ್ರ. ಅಂತಹ ಸಿನಿಮಾಗಳು ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ಜತೆಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ಬಿಜೆಪಿ ಸಂಸದರಿಗೆ ಪ್ರಧಾನಿ ಸಲಹೆಯನ್ನೂ ನೀಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ ಫೈಲ್ಸ್’ ಮಾರ್ಚ್ 11 ರಂದು ತೆರೆಕಂಡಿತ್ತು. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿ ಚಿತ್ರ ತಯಾರಾಗಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರವನ್ನು ವೀಕ್ಷಿಸಿ ಹೊಗಳಿಕೆಯ ಮಾತುಗಳನ್ನಾಡಿದ್ದರು. ಅಲ್ಲದೇ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದ್ದರು. ಈ ವೇಳೆ ಅವರು ಚಿತ್ರ ವೀಕ್ಷಿಸಲು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಇಂದು ವಿಧಾನಸಭೆ ಸಚಿವಾಲಯದ ವತಿಯಿಂದ ರಾಜ್ಯದ ಸಚಿವರು ಹಾಗೂ ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ನಲ್ಲಿ ಇದೇ ವಿಷಯದ ಕುರಿತಂತೆ ಪ್ರತಿಪಕ್ಷಗಳು ತೀವ್ರ ಗದ್ದಲವನ್ನೂ ನಡೆಸಿವೆ.
8 ರಾಜ್ಯಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಗೆ ತೆರಿಗೆ ವಿನಾಯಿತಿ:
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನು ಘೋಷಿಸಿವೆ. ಮೊದಲ ಬಾರಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದು ಹರ್ಯಾಣ. ನಂತರದಲ್ಲಿ ಗುಜರಾತ್, ಮಧ್ಯಪ್ರದೇಶಗಳೂ ವಿನಾಯಿತಿ ಘೋಷಿಸಿದವು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ವೀಕ್ಷಿಸಿ ನಂತರ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ತೆರಿಗೆ ವಿನಾಯಿತಿ ಘೋಷಿಸಿದ ರಾಜ್ಯಗಳಿಗೆ ಗೋವಾ, ತ್ರಿಪುರಾ, ಉತ್ತರಾಖಂಡ್ ಕೂಡ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಯುಪಿಯಲ್ಲಿ ಟ್ಯಾಕ್ಸ್ ಫ್ರೀ ಎಂದು ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಸಂಬಂಧ ಚರ್ಚೆಗಳು ನಡೆದಿವೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆಯನ್ನು ಇಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮೊದಲಾದವರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ತೆರಳುವುದಿಲ್ಲ ಎಂದ ಸಿದ್ದರಾಮಯ್ಯ; ಕಾರಣವೇನು?