ಬೆಂಗಳೂರು, ಜುಲೈ.21: ಉತ್ತರಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರ ಶೋಧ ಕಾರ್ಯ ಮುಂದುವರೆದಿದೆ (Shirur Landslide). ಇನ್ನು ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದ ಕೇರಳ ನಿವಾಸಿ ಅರ್ಜುನ್ಗಾಗಿ ಕಳೆದ ಕೆಲ ದಿನಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ. ಸದ್ಯ ಈಗ ಅರ್ಜುನ್ ಬದುಕಿರುವ ಬಗ್ಗೆ ಸುಳಿವು ಸಿಕ್ಕಿದೆ. ಆತನ ಫೋನ್ ಹಾಗೂ ಲಾರಿ ಇಂಜೆನ್ ಆನ್ ಇದ್ದರೆ ಬಗ್ಗೆ ಮಾಹಿತಿ ಸಿಕ್ಕಿದೆ. ಅರ್ಜುನ್ ಕುಟುಂಬ ಸದಸ್ಯರು ಆಶಾಭಾವನೆ ಹೊರ ಹಾಕಿದ್ದಾರೆ. ಇನ್ನು ಮತ್ತೊಂದೆಡೆ ಸರ್ಕಾರ ಮತ್ತು ಸಚಿವರ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ ಹೊರ ಹಾಕಿದೆ.
ಗುಡ್ಡ ಕುಸಿತ ಸಂಭವಿಸಿ ಅರ್ಜುನ್ ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದು ಜುಲೈ 18ರ ಗುರುವಾರ ರಾತ್ರಿಯ ವರೆಗೂ ಲಾರಿ ಇಂಜನ್ ಚಾಲನೆಯಲ್ಲಿತ್ತು. ಹಾಗೂ ಶುಕ್ರವಾರ ಬೆಳಗ್ಗೆ ಅರ್ಜುನ್‌ನ ಫೋನ್ ರಿಂಗ್ ಆಗಿದೆ. ರೇಂಜ್ ಸಿಕ್ಕಾಗಲೆಲ್ಲ ಫೋನ್ ಆಕ್ಟಿವ್ ಆಗಿದೆ. ಇದರ ಅರ್ಥ ಅವರು ಎಲ್ಲೋ ಒಂದು ಕಡೆ ಬದುಕಿದ್ದಾರೆ ಎಂದು ಅರ್ಜುನ್ ಪತ್ನಿ ಕೃಷ್ಣಪ್ರಿಯಾ ಅವರು ಕೇರಳದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಾಗಿ ಲಾರಿಯು ಗುಡ್ಡ ಕುಸಿತ ಅವಶೇಷದಲ್ಲಿ ಸಿಲುಕಿರದೇ ಬೇರೆ ಕಡೆಯೂ ಇರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಸಂಶಯ ಹೊರ ಹಾಕಿದ್ದಾರೆ. ಇನ್ನು ಅರ್ಜುನ್ ಬದುಕಿರುವ ಸಾಧ್ಯತೆಗಳು ಹೆಚ್ಚಿವೆ. ನಮ್ಮ ಕಸಿನ್ ಕಾಲ್ ಮಾಡಿದಾಗ ಫೋನ್ ಶುಕ್ರವಾರ ಬೆಳಗ್ಗೆ ಸ್ವೀಟ್ಸ್ ಆಫ್ ಆಗಿದೆ. ಕಾರ್ಯಾಚರಣೆಗೆ ಸೇನೆ ಕರೆಸಬೇಕು ಎಂದು ಕಾಣೆಯಾಗಿರುವ ಅರ್ಜುನ್ ಸಹೋದರಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ; ದಿನೇ ದಿನೆ ಹೆಚ್ಚುತ್ತಿದೆ ನಾಪತ್ತೆಯಾದವರ ಸಂಖ್ಯೆ
ಇನ್ನು ಸರ್ಕಾರ ಮತ್ತು ಸಚಿವರ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ ಹೊರ ಹಾಕಿದೆ. ಗುಡ್ಡಕುಸಿದು ಮೂರ್ನಾಲ್ಕು ದಿನಗಳಾದ್ರು ಇನ್ನೂ ಲಾರಿಯನ್ನು ತೆಗೆದಿಲ್ಲ. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಿ ಪರಿಶೀಲಿಸಿಲ್ಲ ಎಂದು ಬೆಂಗಳೂರಿನಲ್ಲಿ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ. ಲಾರಿ ಡ್ರೈವರ್ಗಳು ಅಂದ್ರೆ ರಾಜ್ಯ ಸರ್ಕಾರಕ್ಕೆ ಅಷ್ಟೊಂದು ಕಡೆಗಣನೆ. ನಮ್ಮನ್ನು ಕೂಡ ಗುಡ್ಡ ಕುಸಿದ ಸ್ಥಳಕ್ಕೆ ಹೋಗಲು ಅನುಮತಿ ನೀಡ್ತಿಲ್ಲ. ಗುಡ್ಡ ಕುಸಿದು ಮಂತ್ರಿಗಳೋ ಅಥವಾ ಅವರ ಕಡೆಯವರು ಯಾರಾದರು ಮಣ್ಣಿನೊಳಗಡೆ ಸಿಲುಕಿಕೊಂಡಿದ್ದರೇ ಇವರೆಲ್ಲಾ ಸುಮ್ಮನೇ ಇರ್ತಿದ್ರಾ? ರಾಜ್ಯ ಸರ್ಕಾರ ಕೂಡಲೇ ಲಾರಿ ಚಾಲಕನ ರಕ್ಷಣೆ ಮಾಡಬೇಕು. ನಾಳೆ ಮಧ್ಯಾಹ್ನ 12 ಗಂಟೆಯೊಳಗೆ ಲಾರಿಯನ್ನು ಆಚೆ ತೆಗೆಯಬೇಕು. ಇಲ್ಲದಿದ್ರೆ ಘಟನಾ ಸ್ಥಳದಲ್ಲೇ ಎಲ್ಲ ಲಾರಿಗಳನ್ನು ಅಡ್ಡಲಾಗಿ ಹಾಕಬೇಕಾಗುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ