ಶಿರೂರು ಗುಡ್ಡ ಕುಸಿತ: ಪತ್ತೆಯಾಗದ ಇಬ್ಬರ ಶವ, ಮರಣ ಪತ್ರ ನೀಡದ ಆಡಳಿತದ ವಿರುದ್ಧ ಆಕ್ರೋಶ
ಅಂಕೋಲದ ಶಿರೂರಿನಲ್ಲಿ ಸಂಭವಿಸಿದ್ದ ಭಯಾನಕ ಭೂಕುಸಿತದ ರಕ್ಷಣಾ ಕಾರ್ಯಾಚರಣೆ ಎಂದೋ ಸ್ಥಗಿತಗೊಂಡಿದೆ. ಆದಾಗ್ಯೂ, ಇನ್ನೂ ಇಬ್ಬರ ಶವ ಪತ್ತೆಯಾಗಿಲ್ಲ. ಅಷ್ಟೇ ಅಲ್ಲ ಅವರ ಕುಟುಂಬದವರಿಗೆ ಮರಣ ಪತ್ರವನ್ನೂ ಆಡಳಿತ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಏತನ್ಮಧ್ಯೆ ರಕ್ಷಣಾ ಕಾರ್ಯಾಚರಣೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಕೋರ್ಟ್ ಆದೇಶದ ಹೊರತಾಗಿಯೂ ಎಸ್ಪಿ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಾರವಾರ, ಡಿಸೆಂಬರ್ 11: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತ ಎಲ್ಲವನ್ನೂ ನುಂಗಿ ಹಾಕಿತ್ತು. ನೋಡ ನೋಡುತ್ತಿದ್ದಂತೆಯೇ ಗುಡ್ಡ ಕುಸಿದು ಬಿದ್ದು ಹತ್ತಾರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಆದರೆ ದುರಂತದಲ್ಲಿ ಕಣ್ಮರೆಯಾದ ಇಬ್ಬರ ಶವ ಈವರೆಗೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ಎಂದೋ ಸ್ಥಗಿತಗೊಂಡಿದೆ. ಆದರೆ, ಅವರ ಕುಟುಂಬದವರಿಗೆ ಮರಣ ಪತ್ರವನ್ನೇ ಇನ್ನೂ ನೀಡಲಾಗಿಲ್ಲ. ಹೀಗಾಗಿ ಕುಟುಂಬದವರು, ಒಂದೋ ಮರಣ ಪತ್ರ ಕೊಡಿ ಅಥವಾ ಕಾರ್ಯಾಚರಣೆ ಮುಂದುವರೆಸಿ ಎಂದು ಪಟ್ಟು ಹಿಡಿದಿದ್ದಾರೆ.
ಶಿರೂರಿನಲ್ಲಿ ಭೂಕುಸಿತ ಸಂಭವಿಸಿ 5 ತಿಂಗಳೇ ಕಳೆದು ಹೋಗಿವೆ. ಈವರೆಗೆ 9 ಜನರ ಶವಗಳನ್ನು ಹೊರತೆಗೆಯಲಾಗಿದೆ. ಆದರೆ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವವೇ ಪತ್ತೆಯಾಗಿಲ್ಲ. ಸಿಕ್ಕ ಮೂಳೆಗಳಿಗೆ ಹೆಚ್ಚಿನ ರಾಸಾಯನಿಕ ಹಾಕಿದ್ದರಿಂದ ಡಿಎನ್ಎ ಪರೀಕ್ಷಾ ವರದಿ ಸಹ ಬಂದಿಲ್ಲ. ಈ ಮಧ್ಯೆ ಕಾರ್ಯಾಚರಣೆ ಸಂಪೂರ್ಣ ನಿಲ್ಲಿಸಿ ಮೃತ ಕುಂಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಸಹ ನೀಡಲಾಗಿತ್ತು. ಆದರೆ ಜಗನ್ನಾಥ್, ಲೋಕೇಶ್ ಕುಟುಂಬದವರು ನಮ್ಮವರ ಮರಣ ಪತ್ರ ನೀಡಿ ಅಥವಾ ಕಾರ್ಯಾಚರಣೆ ಮುಂದುವರೆಸಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಅಂಕೋಲದಲ್ಲಿ ಐಆರ್ಬಿ ಕಂಪನಿ ವಿರುದ್ಧ ದಾಖಲಿಸಿದ ದೂರನ್ನು ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲೂ ಭ್ರಷ್ಟಾಚಾರದ ಆರೋಪ!
ದುರಂತ ಎಂದರೆ, ರಕ್ಷಣಾ ಕಾರ್ಯಾಚರಣೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಎಸ್ಪಿ ಎಂ. ನಾರಾಯಣ್ ಐಆರ್ಬಿ ಕಂಪನಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆಗೆ ಅಂಕೋಲ ಕೋರ್ಟ್ ಆದೇಶಿಸಿದೆ. ಆದರೆ ಈವರೆಗೂ ಯಾಕೆ ಎಸ್ಪಿ ವಿರುದ್ಧ ಕೇಸ್ ದಾಖಲಾಗಿಲ್ಲ ಎಂದು ಈಡಿಗ ಸಮಾಜದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ
ಸದ್ಯ ಶಿರೂರಿನಲ್ಲಿ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸಂಪೂರ್ಣ ಬಂದ್ ಮಾಡಿದೆ. ಆದರೆ ಮೃತರ ಕುಟುಂಬಕ್ಕೆ ಮರಣ ಪ್ರಮಾಣ ಪತ್ರ ನೀಡಿಲ್ಲ. ಈ ಮಧ್ಯೆ ಕಾರ್ಯಾಚರಣೆಯಲ್ಲೂ ಭ್ರಷ್ಟಾಚಾರದ ಆರೋಪ ಬಂದಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ